ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.. ಆ ನಂತರ ನಾವೇ ಸನ್ಮಾನ ಮಾಡುತ್ತೇವೆ : ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು
1 min read
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.. ಆ ನಂತರ ನಾವೇ ಸನ್ಮಾನ ಮಾಡುತ್ತೇವೆ : ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು Shree Guru Raghavendra Credit Co-operative Bank saaksha tv
ಬೆಂಗಳೂರು : ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣದ ಸಂಬಂಧ ತಪ್ಪಿತಸ್ಥರಿಗೆ ಶಿಕ್ಷೆಯಾಗಲೆಬೇಕು. ಈ ಪ್ರಕರಣದಲ್ಲಿ ವಂಚನೆಗೆ ಒಳಗಾದವರಿಗೆ ನ್ಯಾಯ ದೊರಕಿದ ನಂತರ ನಾವೇ ಸಂಸದರಿಗೆ ಸನ್ಮಾನ ಮಾಡುತ್ತೇವೆ ಎಂದು ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾಪೋಷಕರಾದ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಮತ್ತು ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಅವ್ರ ನಡೆಯನ್ನು ಖಂಡಿಸಿದರು.
ಇದೇ ಜನವರಿ 10 ನೇ ತಾರೀಖಿಗೆ ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದು ಎರಡು ವರ್ಷಗಳಾಗಲಿದೆ. ಈಗಾಗಲೇ 100ಕ್ಕೂ ಹೆಚ್ಚು ಠೇವಣಿದಾರರು ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಠೇವಣಿದಾರರು ನಿತ್ಯ ಜೀವನ ನಡೆಸುವುದಕ್ಕೂ ಆಗದೆ ಪರದಾಡುತ್ತಿದ್ದಾರೆ. 46 ಸಾವಿರ ನೇರ ಠೇವಣಿದಾರರು, 120 ಸಹಕಾರಿ ಸಂಸ್ಥೆಗಳಲ್ಲಿ ಠೇವಣಿಯಿಟ್ಟಿದ್ದ ಸುಮಾರು 60ರಿಂದ 80 ಸಾವಿರ ಜನ ಗುರು ರಾಘವೇಂದ್ರ ಬ್ಯಾಂಕ್ ವಂಚನೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಇವರ ನೆರವಿಗೆ ಧಾವಿಸಿ ಠೇವಣಿದಾರರ ಹಿತಕಾಯಬೇಕಿದ್ದ ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ಮತ್ತು ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಮಾತ್ರ DICGC ವಿಮೆ ಹಣವನ್ನು ತಾವೇ ಕೊಡಿಸಿದ್ದು ಎಂದು ಹೇಳಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ.
DICGC ವಿಮೆ ಹಣದ ಬಗ್ಗೆ ಮಾತನಾಡುವ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಅವರು ಠೇವಣಿದಾರರ ಪೂರ್ಣ ಹಣ ವಾಪಸ್ ಮಾಡಿಸುವುದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ.? ವಂಚನೆ ಪ್ರಕರಣದ ತನಿಖೆಯ ಬಗ್ಗೆ ಏಕೆ ಚಕಾರವೆತ್ತುತ್ತಿಲ್ಲ.? ಪ್ರಕರಣವನ್ನು ಸಿಬಿಐ ಗೆ ವಹಿಸುವುದರ ಬಗ್ಗೆ ಎಷ್ಟೇ ಒತ್ತಡ ಬಂದರೂ ಸಹ ಆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ.? ವಸಿಷ್ಠ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣದ ಬಗ್ಗೆ ಸಹ ಇದೇ ನಿರ್ಲಕ್ಷ್ಯ ವಹಿಸಿರುವುದು ಏಕೆ ಎಂದು ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಗುಡುಗಿದರು.
ಅಲ್ಲದೆ ಈ ಎಲ್ಲಾ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಟ್ಟು ಆ ನಂತರ ಬೇಕಾದರೆ ಸನ್ಮಾನ ಮಾಡಿಸಿಕೊಳ್ಳಲಿ. ಗುರು ರಾಘವೇಂದ್ರ ಬ್ಯಾಂಕ್, ಗುರುಸಾರ್ವಭೌಮ ಸೊಸೈಟಿ, ವಸಿಷ್ಠ ಕೋ-ಆಪರೇಟಿವ್ ಸೊಸೈಟಿ, ನಾಗರತ್ನ ಕೋ-ಆಪರೇಟಿವ್ ಸೊಸೈಟಿ, ಮಹಾಗಣಪತಿ ಕೋ-ಆಪರೇಟಿವ್ ಸೊಸೈಟಿ, ಬೆಳ್ಳಿ ಬೆಳಕು ಕೋ-ಆಪರೇಟಿವ್ ಸೊಸೈಟಿ ಹೀಗೆ ಒಂದಲ್ಲ ಎರಡಲ್ಲ ಹಲವು ವಂಚನೆ ಪ್ರಕರಣಗಳು ನಡೆದರೂ ಸ್ಥಳೀಯ ಸಂಸದರು ಮತ್ತು ಶಾಸಕರು ಮಾತ್ರ ಅವ್ಯವಹಾರ ನಡೆಯದಂತೆ ತಡೆಯುವುದಾಗಲಿ, ಹಣ ಕಳೆದುಕೊಂಡ ಠೇವಣಿದಾರರ ಪರ ನಿಲ್ಲುವುದಾಗಲಿ ಮಾಡದೆ ಕೇವಲ ತಮ್ಮನ್ನು ತಾವು ಹೊಗಳಿಕೊಂಡು ಸನ್ಮಾನ ಸಮಾರಂಭಗಳಲ್ಲಿ ತೊಡಗಿರುವುದನ್ನು ನೋಡಿದರೆ ಅವರ ಜನಪರ ಕಾಳಜಿ ಎಂತಹುದು ಎಂದು ತಿಳಿಯುತ್ತದೆ ಎಂದು ಕಿಡಿಕಾರಿದರು.
ಇನ್ನು ಗುರು ಸಾರ್ವಭೌಮ ಸೊಸೈಟಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಆ ಸೊಸೈಟಿಯ ಠೇವಣಿದಾರರಿಗೆ ಹೇಗೆ ಪರಿಹಾರ ಕೊಡಿಸುತ್ತೀರಿ.? ಇದುವರೆಗೆ ಕೇವಲ DICGC ವಿಮೆ ಹಣ ಅಂದರೆ ಸಾರ್ವಜನಿಕರ ವಿಮೆ ಹಣವನ್ನು ಹಂಚಿದ್ದು ಬಿಟ್ಟರೆ ಬೇರೇನೂ ಕೆಲಸವಾಗಿಲ್ಲ. 12ಸಾವಿರ ಠೇವಣಿದಾರರ ಸುಮಾರು ಸಾವಿರ ಕೋಟಿ ರೂಪಾಯಿಗಳನ್ನು ಹೇಗೆ ವಾಪಸ್ ಕೊಡಿಸುತ್ತೀರಿ.? 120 ಸೊಸೈಟಿಗಳ ಠೇವಣಿದಾರರಿಗೆ ಯಾವ ರೀತಿ ಪರಿಹಾರ ಕೊಡಿಸುತ್ತೀರಿ.? ಏಕೆ ಈ ಸೊಸೈಟಿಗಳ ಹೆಸರುಗಳನ್ನು ಬಹಿರಂಗವಾಗಿ ಘೋಷಣೆ ಮಾಡಿಲ್ಲ.? ಗ್ರಾಹಕರಿಗೆ ಏಕೆ ಸ್ಪಷ್ಟ ಮಾಹಿತಿಯನ್ನು ಕೊಡುತ್ತಿಲ್ಲ.? DICGC ವಿಮೆ ಕೇವಲ ವೈಯುಕ್ತಿಕ ಠೇವಣಿದಾರರಿಗೆ ಮಾತ್ರ ಸಿಗುತ್ತದೆ, ಸೊಸೈಟಿಗಳಲ್ಲಿ ಠೇವಣಿ ಇಟ್ಟವರಿಗೆ ಸಿಗುವುದಿಲ್ಲ ಎಂಬ ಸತ್ಯವನ್ನು ಏಕೆ ಮುಚ್ಚಿಟ್ಟಿದ್ದೀರಿ.? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿ, ಠೇವಣಿದಾರರ ಕಟ್ಟಕಡೆಯ ರೂಪಾಯಿಯೂ ಅವರಿಗೆ ವಾಪಸ್ ಸಿಗುವಂತೆ ಮಾಡಿ, ವಂಚಕರಿಗೆ ಶಿಕ್ಷೆಯಾಗುವಂತೆ ಮಾಡಿ ಆ ನಂತರ ನೀವು ಸನ್ಮಾನ ಮಾಡಿಸಿಕೊಂಡರೆ ಅದಕ್ಕೆ ಯಾರದ್ದೇ ತಕರಾರಿಲ್ಲ. ಆದರೆ ಅದ್ಯಾವುದನ್ನೂ ಮಾಡದೆ ಕೇವಲ ತಮಗೆ ಬೇಕಾದವರಿಂದ ಸನ್ಮಾನ ಸಮಾರಂಭಗಳನ್ನು ಏರ್ಪಡಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುವುದು ಒಪ್ಪತಕ್ಕುದ್ದಲ್ಲ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಜನವರಿ 10ರಂದು ಠೇವಣಿದಾರರಿಂದ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರುವ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಲಾಗಿದೆ. ಆದರೆ ಅದೇ ಮೈದಾನದಲ್ಲಿ ಶಾಸಕರು, ಸಂಸದರಿಗೆ ಬೇಕಾದ ಸಂಘಟನೆಗಳ ಕಾರ್ಯಕ್ರಮಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇವೆ. ಯಾರು ಏನೇ ಮಾಡಿದರೂ ಹೋರಾಟ ಮಾತ್ರ ನಿಲ್ಲುವುದಿಲ್ಲ. ಜನವರಿ 7ರಂದು ಶಾಸಕರು, ಸಂಸದರ ಸನ್ಮಾನ ಸಮಾರಂಭಕ್ಕೆ ಮಾನ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಆಗಮಿಸುತ್ತಿದ್ದು ಅಂದು ಠೇವಣಿದಾರರೆಲ್ಲಾ ಸೇರಿ ಸಚಿವರು, ಶಾಸಕರು, ಸಂಸದರಿಗೆ ಮುಖಾಮುಖಿ ಪ್ರಶ್ನೆ ಕೇಳಲಿದ್ದಾರೆ.
ಇನ್ನು ಜನವರಿ 10ರಂದು ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಡಾ. ಶಂಕರ್ ಗುಹಾ ತಿಳಿಸಿದ್ದಾರೆ.
ಇದೇ ವೇಳೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಠೇವಣಿದಾರರು ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ಆರಂಭಿಸಲಿದ್ದಾರೆ. ಇದುವರೆಗೆ ಬ್ಯಾಂಕ್ ಠೇವಣಿದಾರರು ಅನುಭವಿಸಿರುವ ಸಂಕಷ್ಟವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನಕ್ಕೆ ತರುವಲ್ಲಿ ಸ್ಥಳೀಯ ಶಾಸಕರು ಮತ್ತು ಸಂಸದರು ವಿಫಲರಾಗಿರುವುದರಿಂದ ಇದೀಗ ಠೇವಣಿದಾರರೇ ನೇರವಾಗಿ ಪ್ರಧಾನಿ ಪತ್ರ ಬರೆದು ತಮ್ಮ ಪರಿಸ್ಥಿತಿಯನ್ನು ವಿವರಿಸಲಿದ್ದಾರೆ ಎಂದು ಗುಹಾ ಅವರು ತಿಳಿಸಿದರು.