ಬೆಂಗಳೂರು : ಡ್ರಗ್ ಮಾಫಿಯಾ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸುದ್ದಿಗೋಷ್ಟಿ ನಡೆಸಿದ್ದು, ಸದ್ಯ ಬಂಧಿತರಾಗಿರುವ ಇಬ್ಬರು ಆರೋಪಿಗಳ ಮೇಲೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಟಿ ರಾಗಿಣಿ ಬಗ್ಗೆ ಮಾತನಾಡಿದ ಅವರು, ‘ ಸದ್ಯ ನಟಿ ರಾಗಿಣಿ ತನಿಖೆ ನಡೆಯುತ್ತಿದೆ, ಸದ್ಯಕ್ಕೆ ಅವರ ಪಾತ್ರ ಏನು ಎಂಬುದನ್ನು ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ. ಒಂದು ತಿಂಗಳನಿಂದ ಸಿಸಿಬಿ ಅಧಿಕಾರಿಗಳು ಡ್ರಗ್ ಜಾಲದ ತನಿಖೆ ಮಾಡುತ್ತಿದ್ದಾರೆ. ಸಿಸಿಬಿ ದಾಳಿ ವೇಳೆ ಬಂಧಿಸಲಾಗಿದ್ದ ಅನಿಕಾ ನೀಡಿದ ಮಾಹಿತಿ ಅನ್ವಯ ರವಿಶಂಕರ್ ಮತ್ತು ರಾಹುಲ್ ಎಂಬ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅವರಿಂದ ಹಲವು ಮಾಹಿತಿ ಸಿಕ್ಕಿದೆ. ಅವರ ಜೊತೆ ಸಂಪರ್ಕದಲ್ಲಿದ್ದವರ ವಿಚಾರಣೆಯೂ ನಡೆಸುತ್ತೇವೆ”
‘ರವಿಶಂಕರ್ ಎಂಬ ವ್ಯಕ್ತಿ ಜಯನಗರದ ಆರ್ ಟಿ ಓ ಕಚೇರಿಯಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದ. ಆತ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ, ಡ್ರಗ್ ಪೆಡ್ಲರ್ ಆಗಿದ್ದ ಎಂಬ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ. ಮೊಬೈಲ್ ಪರಿಶೀಲಿಸಿದ ವೇಳೆ ಇನ್ನು ಹೆಚ್ಚಿನ ಮಾಹಿತಿ ಸಿಕ್ಕಿದೆ’ ಎಂದು ಕಮಿಷನರ್ ತಿಳಿಸಿದ್ದಾರೆ.
‘ಇನ್ನೊಬ್ಬ ವ್ಯಕ್ತಿ ಹೆಸರು ರಾಹುಲ್. ರಿಯಲ್ ಎಸ್ಟೇಟ್ ಮತ್ತು ಇತರೆ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಈತ ಬೇರೆ ರಾಜ್ಯ ಹಾಗೂ ದೇಶದ ಕಾರ್ಯಕ್ರಮಗಳಲ್ಲಿ, ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ’ ಎಂದಿರುವ ಕಮಿಷನರ್, ರವಿಶಂಕರ್ ಮತ್ತು ರಾಹುಲ್ ಇಬ್ಬರು ಕನ್ನಡ ಚಿತ್ರರಂಗದ ನಟಿಯರ ಜೊತೆ ಸಂಪರ್ಕದಲ್ಲಿದ್ದರು. ರಾಗಿಣಿ ಅವರನ್ನು ಸಹ ಇದೇ ಹಿನ್ನೆಲೆ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಕೆಲವರಿಗೆ ನೋಟಿಸ್ ನೀಡುವ ತಯಾರಿ ನಡೆದಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಇಂದ್ರಜಿತ್ ಅವರು ಹಿಂದಿನ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದರು. ಆ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿ ಅನ್ವಯ ಬಂಧಿತ ಆರೋಪಿಗಳು ವಿದೇಶಿ ವ್ಯಕ್ತಿಯಿಂದ ಡ್ರಗ್ ಪಡೆಯುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ಪ್ರಕರಣ ತನಿಖೆಯನ್ನು ಕಾನೂನಿನ ಅನ್ವಯ ಅಳವಾಗಿ ಮಾಡಲಾಗುತ್ತಿದೆ. ಖಂಡಿತ ಪ್ರಕರಣದ ಅಳವಾದ ತನಿಖೆಯನ್ನು ಮಾಡಿ ಮಾಹಿತಿ ನೀಡುತ್ತೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.








