ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಸಂಬಂಧ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಅನನ್ಯ ಅಪಾರ್ಟ್ಮೆಂಟ್ನಲ್ಲಿದ್ದ ರಾಗಿಣಿ ಅವರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ.
ಮತ್ತೊಂದೆಡೆ, ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ಕಷ್ಟಡಿಯಲ್ಲಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಒಂದೆಡೆ ಕೂರಿಸಿಕೊಂಡು ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇಂದು ಬೆಳಿಗ್ಗೆ 6.30ಕ್ಕೆ ರಾಗಿಣಿ ಅವರ ಫ್ಲ್ಯಾಟ್ ಮೇಲೆ ಸರ್ಚ್ ವಾರೆಂಟ್ನೊಂದಿಗೆ ದಾಳಿ ಮಾಡಿ ಸುಮಾರು 2 ಗಂಟೆಗೂ ಹೆಚ್ಚು ಸಮಯ ಶೋಧ ನಡೆಸಿದ್ದರು. ಮನೆ ಶೋಧ ನಡೆಸಿದ ನಂತರ ಮನೆಯಲ್ಲಿಯೇ ವಿಚಾರಣೆ ನಡೆಸಲು ಆರಂಭಿಸಿದ್ದಾರೆ.
ಸಿಸಿಬಿ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಟಿ ರಾಗಿಣಿ ಉಡಾಫೆ ಉತ್ತರ ನೀಡಿದ್ದಾರೆ.
ನಿಮಗೂ, ರವಿಶಂಕರ್ಗೂ ಏನು ಸಂಬಂಧ, ನೀವು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಿರಾ, ತೆಗೆದುಕೊಂಡರೆ ಯಾರು ಡ್ರಗ್ಸ್ ತಂದು ಕೊಡುತ್ತಿದ್ದರು ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ರಾಗಿಣಿ ಗರಂ ಆಗಿದ್ದಾರೆ.
ರವಿಶಂಕರ್ ಡ್ರಗ್ ಡೀಲರ್ ಅಲ್ಲ, ಕೆಲವರಗೆ 2-3 ಸಾರಿ ತಂದು ಕೊಟ್ಟಿರಬಹುದು. ಅದಕ್ಕೂ ನನಗೂ ಏನು ಸಂಬಂಧ, ನನ್ನನ್ನು ಏಕೆ ಪ್ರಶ್ನೆ ಮಾಡುತ್ತಿದ್ದೀರಿ ಎಂದು ಗರಂ ಆಗುತ್ತಿದ್ದಂತೆ ರಾಗಿಣಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಕೆಲವೇ ಕ್ಷಣಗಳಲ್ಲಿ ರಾಗಿಣಿ ಅವರನ್ನು ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದ್ದು, ರಾಗಿಣಿಗೆ ಬಂಧನದ ಭೀತಿ ಎದುರಾಗಿದೆ.