ಮೈಸೂರು: ದಸರಾ ಮಹೋತ್ಸವದ ಕುರಿತಾದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಸೆಕ್ಯುಲರಿಸಂ ಮತ್ತು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತದ ಮೂಲ ಸಂಸ್ಕೃತಿಗೆ ಧಕ್ಕೆ ತರುವುದನ್ನು ಸಹಿಸಬೇಕೇ?” ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲ
ಹೈಕೋರ್ಟ್ ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ಎರಡು ಬಾರಿ ಸಂಸದನಾದವನನ್ನು ‘ಮೂರ್ಖ’ ಎಂದು ಕರೆಯುವ ಮುಖ್ಯಮಂತ್ರಿಗಳೇ, ನಿಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ಚರ್ಚೆಯಾಗುತ್ತಿದೆ ಎಂಬುದನ್ನು ಒಮ್ಮೆ ನೋಡಿ. ನೀವು ಮುಡಾದಲ್ಲಿ 14 ಸೈಟ್ ಪಡೆದ ಹಗಲು ದರೋಡೆ ಪ್ರಕರಣ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ,” ಎಂದು ಸಿದ್ದರಾಮಯ್ಯ ಅವರಿಗೆ ನೇರ ತಿರುಗೇಟು ನೀಡಿದರು.
ಹೈಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಬೇಸರ
ತಮ್ಮ ಪಿಐಎಲ್ ವಜಾಗೊಂಡ ಕುರಿತು ಮಾತನಾಡಿದ ಅವರು, “ಬಾನು ಮುಷ್ತಾಕ್ ಅವರು ತಾಯಿ ಭುವನೇಶ್ವರಿ ಹಾಗೂ ಅರಿಶಿನ-ಕುಂಕುಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರೂ ಕನಿಷ್ಠ ಕ್ಷಮೆ ಕೋರಿಲ್ಲ. ಈ ಕಾರಣಕ್ಕಾಗಿಯೇ ನಾನು ನ್ಯಾಯಾಲಯದ ಮೊರೆ ಹೋಗಿದ್ದೆ. ಅವರ ಹೇಳಿಕೆಯನ್ನು ಭಾವಾನುವಾದ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು. ಆದರೆ, ನ್ಯಾಯಾಲಯವು ‘ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ’ ಎಂಬ ಸಣ್ಣ ಕಾರಣ ನೀಡಿ, ಇಂದಿರಾಗಾಂಧಿ ತಂದ ‘ಸೆಕ್ಯುಲರ್’ ಪದದ ಚೌಕಟ್ಟಿನಲ್ಲಿ ಅರ್ಜಿಯನ್ನು ವಜಾಗೊಳಿಸಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ನ್ಯಾಯಾಲಯದ ಬಗ್ಗೆ ಮಾತನಾಡುವುದಿಲ್ಲ, ಆದರೆ ನ್ಯಾಯ ಸಿಗಬಹುದೆಂಬ ಸಣ್ಣ ಭರವಸೆ ಇತ್ತು. ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಮೂಡಿಸಿದ ಸಮೀರ್ಗೆ ಸೆಷನ್ಸ್ ಕೋರ್ಟ್ ಜಾಮೀನು ನೀಡುತ್ತದೆ, ಮಹೇಶ್ ತಿಮರೋಡಿ ಆರಾಮವಾಗಿ ಓಡಾಡಿಕೊಂಡಿದ್ದಾನೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯನ್ನು ರಕ್ಷಿಸಲು ಹೋರಾಡಿದರೆ ಹೀಗಾಗುತ್ತದೆ,” ಎಂದು ಬೇಸರ ವ್ಯಕ್ತಪಡಿಸಿದರು.
“ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಂಸ್ಕೃತಿಗೆ ಧಕ್ಕೆಯೇ?”
ಪ್ರತಾಪ್ ಸಿಂಹ ಅವರು ಸೆಕ್ಯುಲರಿಸಂ ಮತ್ತು ವಾಕ್ ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಪ್ರಶ್ನಿಸಿದರು. “ಅಶೋಕ ಚಕ್ರದ ಕೆಳಗೆ ‘ಸತ್ಯಮೇವ ಜಯತೇ’ ಎಂದಿದೆ. ನಾಳೆ ಯಾರಾದರೂ ಅದನ್ನು ಅವಮಾನಿಸಿದರೆ ಅದೂ ವಾಕ್ ಸ್ವಾತಂತ್ರ್ಯವೇ? ‘ಸತ್ಯಂ ಶಿವಂ ಸುಂದರಂ’ ಎಂಬ ತತ್ವವನ್ನು ತೆಗೆದುಹಾಕಲು ಮುಂದಾದರೂ ಇದೇ ಕಾರಣ ನೀಡುತ್ತೀರಾ? ಹಜರತ್ ಅಲಿ ದರ್ಗಾದಲ್ಲಿದ್ದ ಅಶೋಕ ಚಕ್ರವನ್ನು ಕಲ್ಲಿನಿಂದ ಕುಟ್ಟಿದ್ದು ಯಾವ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಬರುತ್ತದೆ? ದ್ವೇಷ ಮತ್ತು ದಾರ್ಷ್ಟ್ಯದಿಂದ ನೀಡುವ ಇಂತಹ ಹೇಳಿಕೆಗಳನ್ನು ಸೆಕ್ಯುಲರ್ ಪರಿಧಿಯಲ್ಲಿ ನೋಡುವುದು ಎಷ್ಟು ಸರಿ?” ಎಂದು ಅವರು ಪ್ರಶ್ನಿಸಿದರು.
ಹೊಸ ಪಕ್ಷದ ವದಂತಿಗೆ ಸ್ಪಷ್ಟನೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಸೇರಿ ಹೊಸ ಪಕ್ಷ ಕಟ್ಟುವ ಬಗ್ಗೆ ಹರಡಿದ್ದ ವದಂತಿಗಳಿಗೆ ಪ್ರತಾಪ್ ಸಿಂಹ ತೆರೆ ಎಳೆದರು. “ನನ್ನ ತಂದೆ ಜನಸಂಘದ ದೀಪದ ಚಿಹ್ನೆಯಿಂದ ಗೆದ್ದವರು. ನಮ್ಮ ಕುಟುಂಬದ ನಿಷ್ಠೆ ಸಂಘ ಮತ್ತು ಬಿಜೆಪಿಗೆ ಮಾತ್ರ. ಅಧಿಕಾರ ಇರಲಿ, ಇಲ್ಲದಿರಲಿ, ನಾನು ಪಕ್ಷವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಇದೇ ಮಾತನ್ನು ನಾನು ಯತ್ನಾಳ್ ಅವರಿಗೂ ಸ್ಪಷ್ಟಪಡಿಸಿದ್ದೇನೆ,” ಎಂದು ಹೇಳಿದರು.
ಕೊನೆಯಲ್ಲಿ, “ನಾನು ನ್ಯಾಯಾಲಯದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ, ನನ್ನ PIL ಅನ್ನು ಸೆಕ್ಯುಲರಿಸಂ ಚೌಕಟ್ಟಿನಲ್ಲಿ ವಜಾಗೊಳಿಸಲಾಗಿದೆ. ಅದೇ ವಾಕ್ ಸ್ವಾತಂತ್ರ್ಯವನ್ನು ಬಳಸಿ ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ,” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.








