ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರಿಗೆ ಇ-ಖಾತಾ ನೀಡುವ ಪ್ರಕ್ರಿಯೆ ಈಗ ಇನ್ನೂ ಒಂದು ಹೆಜ್ಜೆ ಮುಂದುವರೆದಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಪ್ರಕಾರ, ಇ-ಖಾತಾ ವಿತರಣೆಯು ಇದೇ ಜುಲೈ 1ರಿಂದ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 25,000 ಆಸ್ತಿ ಮಾಲೀಕರ ಮನೆ ಬಾಗಿಲಿಗೇ ಇ-ಖಾತಾ ತಲುಪಿಸಲಾಗುವುದು.
BBMP ವ್ಯಾಪ್ತಿಯಲ್ಲಿ ಪ್ರಕ್ರಿಯೆ ಆರಂಭ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆ ಆರಂಭವಾಗಿದ್ದು, ಪ್ರತಿ ವಾರದಂತೆ ಸಾವಿರಾರು ಜನರಿಗೆ ಇ-ಖಾತಾ ನೀಡಲು ಯೋಜನೆ ರೂಪಿಸಲಾಗಿದೆ. ಸರ್ಕಾರ ನೀಡಿದ್ದ ಭರವಸೆ ಪ್ರಕಾರ, ಜನರು ತಮ್ಮ ಮನೆ ಬಾಗಿಲಲ್ಲೇ ಇ-ಖಾತಾ ಪಡೆಯಲಿದ್ದಾರೆ ಎಂದು ಡಿಕೆಶಿ ತಿಳಿಸಿದರು.
25 ಲಕ್ಷ ಆಸ್ತಿ – ಕೇವಲ 5 ಲಕ್ಷ ಅರ್ಜಿ
ಬೆಂಗಳೂರು ನಗರದಲ್ಲಿ ಸುಮಾರು 25 ಲಕ್ಷ ಆಸ್ತಿಗಳಿದ್ದು, ಈಗಾಗಲೇ ಕೇವಲ 5 ಲಕ್ಷ ಆಸ್ತಿ ಮಾಲೀಕರು ಅಂತಿಮ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಉಳಿದ ಆಸ್ತಿ ಮಾಲೀಕರಿಗೂ ಪ್ರಕ್ರಿಯೆ ಸುಲಭಗೊಳಿಸಲು ಮತ್ತು ಅರಿವು ಮೂಡಿಸಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಇ-ಖಾತಾ ಪಡೆಯಲು ಆಫೀಸ್‌ಗಳಿಗೆ ಓಡಾಡುವ ಅವಶ್ಯಕತೆಯಿಲ್ಲದಂತೆ, ಅಧಿಕಾರಿಗಳು ನೇರವಾಗಿ ಮನೆಗೆ ಬಂದು ಇ-ಖಾತಾ ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಸಮಯ, ಹಣ ಹಾಗೂ ಶ್ರಮದ ಉಳಿತಾಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.