ವಿಜಯಪುರ : ನಾವು ಯಾವುದೇ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೂ ಅಲ್ಲಿ ವಿವಿಧ ಬಗೆಯ ಹಣ್ಣುಗಳು ಹಾಗೂ ಇನ್ನಿತರ ವಸ್ತುಗಳ ಮಾರಾಟ ಮಾಡುವುದನ್ನು ನೋಡಿದ್ದೇವೆ. ಇವರೆಲ್ಲ ಮಧ್ಯವರ್ತಿಗಳ ಕಾಟವಿಲ್ಲದೆ, ಕಡಿಮೆ ಬೆಲೆಗೆ ಹಣ್ಣು ಖರೀದಿಸಿ, ಗ್ರಾಹಕರಿಗೂ ಯೋಗ್ಯದರದಲ್ಲಿ ಮಾರಾಟ ಮಾಡುತ್ತಿರುತ್ತಾರೆ. ಸದ್ಯ ಇಂತಹ ಮಾರಾಟಗಾರರು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ವಿಜಯಪುರದಲ್ಲಿ ಮುಖ್ಯ ಬೆಳೆಯಾಗಿರುವ ಸಪೋಟಾ ಅಂದರೆ ಚಿಕ್ಕು ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸಾವಯವ ವಿಧಾನದಿಂದ ಬೆಳೆಯುವ ಈ ಚಿಕ್ಕುಗಳನ್ನು ನೇರವಾಗಿ ಜಮೀನಿನಿಂದ ಕಟಾವು ಮಾಡಿ ತಂದು ಮಾರಲಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಹೋಗುವ ಜನರು ಇವುಗಳನ್ನು ಹೆಚ್ಚಾಗಿ ಖರೀದಸುತ್ತಿರುತ್ತಾರೆ.
ಹೀಗೆ ರಸ್ತೆ ಪಕ್ಕದಲ್ಲಿ ಮಾರಾಟ ಮಾಡುವ ಬೆಳೆಗಾರರು ಯಾವುದೇ ಮಧ್ಯವರ್ತಿಯನ್ನು ಅವಲಂಬಿಸದೇ, ತಾವೇ ಖುದ್ದು ತಂದು ಮಾರಾಟ ಮಾಡುತ್ತಾರೆ. ಇದರಿಂದಾಗಿ ಇವರಿಗೆ ಹೆಚ್ಚಿನ ಆದಾಯ ಬರುತ್ತಿದೆ.
ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಸ್ತೆಯ ಎರಡು ಬದಿಗೆ ಸಣ್ಣ ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ರೈತರೊಬ್ಬರು ಜೀವನ ನಡೆಸುತ್ತಿದ್ದು, ಅಂದಾಜು 200 ಕೆ.ಜಿ ಹಣ್ಣುಗಳನ್ನ ಮಾರಾಟ ಮಾಡುತ್ತಾರೆ. ಇದೇ ಹಣ್ಣುಗಳನ್ನ ಮಾರುಕಟ್ಟೆಯಲ್ಲಿ ಖರೀದಿಸಿದರೆ, 60 ರೂಪಾಯಿಗೆ ಸಿಗುತ್ತದೆ. ಆದರೆ, ಇವರು ಕೆಜಿಗೆ ಕೇವಲ 25 ರೂ. ನಂತೆ ಮಾರಾಟ ಮಾಡುತ್ತಾರೆ.
ವಿಜಯಪುರ ಜಿಲ್ಲೆಯ ಮಣ್ಣು ಮತ್ತು ಹವಾಗುಣ ಸಪೋಟ ಬೆಳೆಗಳಿಗೆ ಬಹಳಷ್ಟು ಉಪಯುಕ್ತವಾಗಿದೆ. ಜೊತೆಗೆ ರೈತರು ಹಣ್ಣುಗಳನ್ನ ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿಯೇ ಬೆಳೆದು ತೋರಿಸಿದ್ದಾರೆ.