ಕೊಡಗಿನಲ್ಲಿ ಮತ್ತೆ ಭೂಕಂಪ; ವಾರದಲ್ಲಿ 4 ಭಾರಿ ಕಂಪಿಸಿದ ಭೂಮಿ…
ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಭೂಕಂಪನ ಸಂಭವಿಸಿದೆ. ಒಂದೇ ವಾರದ ಅವಧಿಯಲ್ಲಿ 4 ಭಾರಿ ಭೂಮಿ ಕಂಪಿಸಿದೆ. ಕೊಡಗಿನ ಕೆಲವೆಡೆ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆಯಾಗಿದೆ.
ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 1.8 ರಷ್ಟು ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಿಂದ ವಾಯುವ್ಯ ದಿಕ್ಕಿನಲ್ಲಿ 5.2 ಕಿ.ಮೀ ದೂರದಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ನಸುಕಿನ 1.15ರಲ್ಲಿ ಭೂಕಂಪ ಸಂಭವಿಸಿದೆ. ಇದರಿಂದ ಕೆಲವು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವ ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿರುವ ಜನರಿಗೆ ಉಂಟಾಗಿದೆ. ಯಾವುದೇ ಹಾನಿಯಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ದೃಢಪಡಿಸಿದೆ.
ಭೂಮಿ ಕಂಪಿಸುವುದರೊಂದಿಗೆ ವಿಚಿತ್ರವಾದ ಶಬ್ದ ಭೂಮಿ ಕೇಳಿ ಬಂದಿದ್ದ ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ. 2018ರಲ್ಲೂ ಭೂಕಂಪ ಸಂಭವಿಸಿದ ಬಳಿಕ ಸುರಿದ ಭಾರಿ ಮಳೆಯಲ್ಲಿ ಭೂಕುಸಿತಗಳು ಸಂಭವಿಸಿದ್ದವು.