ಹವಾನಾ: ಕ್ಯೂಬಾದಲ್ಲಿ (Cuba) 6.8 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿರುವ ಅನುಭವವಾಗಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ 2ನೇ ಅತಿದೊಡ್ಡ ನಗರವಾದ ಸ್ಯಾಂಟಿಯಾಗೊ ಡಿ ಕ್ಯೂಬಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾನಿಯಾಗಿದೆ. ಇತ್ತೀಚೆಗಷ್ಟೇ ಇದೇ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಜನರು ಸಂಕಷ್ಟದಲ್ಲಿದ್ದಾರೆ.
ಆದರೆ, ಯಾವುದೇ ಸಾವು- ನೋವುಗಳ ಕುರಿತು ವರದಿಯಾಗಿಲ್ಲ. ಭೂಕಂಪದ ಕೇಂದ್ರ 14 ಕಿಮೀ (8.7 ಮೈಲುಗಳು) ಆಳದಲ್ಲಿದೆ. ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಹೇಳಿದೆ. ಭೂಕಂಪದಿಂದಾಗಿ ಮನೆಗಳು ಹಾನಿಗೊಳಗಾಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಈ ಸಮಯದಲ್ಲಿ ನಮ್ಮ ಮೊದಲ ಆದ್ಯತೆ ಜನರ ಜೀವಗಳನ್ನು ಉಳಿಸುವುದು ಎಂದು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕ್ಯೂಬಾದಲ್ಲಿ ಚಂಡಮಾರುತ ಬೀಸಿತ್ತು. ಇದರಿಂದಾಗಿ ಇನ್ನೂ ಅಲ್ಲಿನ ಬದುಕು ಸುಧಾರಿಸಿಲ್ಲ. ಇದರ ಮಧ್ಯೆ ಈಗ ಭೂಕಂಪ ಅಲ್ಲಿನ ಜನರ ಬದುಕಿಗೆ ತಣ್ಣೀರು ಎರಿಚಿದೆ.








