Gujarath Drug Case – ಈ ಪಾಪಕ್ಕೆ ಹೊಣೆ ಯಾರು ಎಂದು ಮೋದಿಗೆ ರಾಹುಲ್ ಪ್ರಶ್ನೆ
ಗುಜರಾತಿನಲ್ಲಿ ಪದೇ ಪದೇ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರದಲ್ಲಿ ಎಷ್ಟು ದಿನ ಮೌನವಾಗಿರುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಮುಂಬೈನ ಆಂಟಿ ನಾರ್ಕೋಟಿಕ್ಸ್ ಸೆಲ್ (ಎಎನ್ಸಿ) ಗುಜರಾತ್ನಲ್ಲಿ ಮೆಫೆಡ್ರೋನ್ ತಯಾರಿಕಾ ಘಟಕದ ಮೇಲೆ ದಾಳಿಮಾಡಿ 1,026 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಘಟನೆಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಗುಜರಾತ್ ನಲ್ಲಿ ಡ್ರಗ್ ದಂಧೆ ನಡೆಯುತ್ತಿದೆಯೇ? ಪ್ರಧಾನಮಂತ್ರಿಗಳೇ, ಈ ಪ್ರಶ್ನೆಗಳಿಗೆ ಉತ್ತರಿಸಿ. ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಗುಜರಾತ್ ತಲುಪುತ್ತಿದೆ. ಗಾಂಧಿ-ಪಟೇಲರು ಹುಟ್ಟಿದ ಈ ಪುಣ್ಯಭೂಮಿಯಲ್ಲಿ ಈ ವಿಷ ಉಗುಳುವವರು ಯಾರು? ಪದೇ ಪದೇ ಮಾದಕ ವಸ್ತು ವಶವಾಗುತ್ತಿದ್ದರೂ ಬಂದರು ನಿರ್ವಹಣೆಯನ್ನು ಏಕೆ ಪ್ರಶ್ನಿಸುತ್ತಿಲ್ಲ? ಗುಜರಾತ್ನಲ್ಲಿ ಡ್ರಗ್ ಕಾರ್ಟೆಲ್ಗಳನ್ನು ನಡೆಸುತ್ತಿರುವ ನಾರ್ಕೋಸ್ ಅನ್ನು ಹಿಡಿಯಲು ಎನ್ಸಿಬಿ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ? ಕೇಂದ್ರ ಮತ್ತು ಗುಜರಾತ್ ಸರ್ಕಾರದಲ್ಲಿದ್ದುಕೊಂಡು ಮಾಫಿಯಾದ ‘ಸ್ನೇಹಿತರನ್ನು’ ರಕ್ಷಿಸುತ್ತಿರುವವರು ಯಾರು’ ಎಂದು ರಾಹುಲ್ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನು ಎಷ್ಟು ದಿನ ಉತ್ತರ ನೀಡದೆ ಸುಮ್ಮನಿರುತ್ತೀರಿ ಎಂದು ಪ್ರಧಾನಿಯನ್ನು ರಾಹುಲ್ ಪ್ರಶ್ನಿಸಿದರು.