ಇಬ್ಬನಿ ಕರಗಿದಾಗ.. ಧಾರವಾಹಿ ಭಾಗ – 1
ಅನಿತಾ, ಆರತಿ ಇಬ್ಬರು ಆತ್ಮೀಯ ಗೆಳತಿಯರು. ಅನಿತಾ ಹಳ್ಳಿಯಲ್ಲಿ ಮಧ್ಯಮವಗ೯ದ ತುಂಬು ಕುಟುಂಬದಲ್ಲಿ ಬೆಳೆಯುತ್ತಿದ್ದರೆ, ಆರತಿ ನಗರದಲ್ಲಿ ತನ್ನ ಅಣ್ಣ ಅಕ್ಕನ ಜೊತೆ ಕಡುಬಡತನದಲ್ಲಿ ಬೆಳೆದ ಹೆಣ್ಣು.
ಆರತಿ ತನ್ನ ಶಿಕ್ಷಣ ತರಬೇತಿ ಮುಗಿಸಿ ಅನಿತಾ ಇರುವ ಹಳ್ಳಿ ಶಾಲೆಗೆ ತಾತ್ಕಲಿಕವಾಗಿ ಶಿಕ್ಷಕಿಯಾಗಿ ಸೇರಿ ತನ್ನ ಮನೆಗೆ ಆಸರೆಯಾಗಿ ನಿಲ್ಲುತ್ತಾಳೆ. ದಿನ ನಗರಕ್ಕೆ ಹೋಗಿ ಬರುವ ಅನುಕೂಲವಿಲ್ಲದ ಆಕೆ ಅಲ್ಲಿನ ಮುಖ್ಯೋಪಾಧ್ಯಾಯರ ನೆರವಿನಿಂದ ಅನಿತಾ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ದಿನ ಕಳೆದಂತೆ ಇಬ್ಬರಲ್ಲೂ ಆತ್ಮಿಯತೆ ಬೆಳೆದು ಉತ್ತಮ ಸ್ನೇಹಿತರಾಗುತ್ತಾರೆ.

ಆರತಿ ತಾತ್ಕಾಲಿಕವಾಗಿ ಹಳ್ಳಿಯಲ್ಲಿ ಶಿಕ್ಷಕಿಯಾಗಿ ದುಡಿತಾ ಇರೋದ್ರಿಂದ ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಲು ಬಯಸುತ್ತಾಳೆ. ಕೆಲಸವು ಸಿಗುತ್ತದೆ. ಆದರೆ ಗೆಳತಿಯನ್ನು ಬಿಟ್ಟಿರಲಾಗದ ಅವಳು ಅನಿತಾ ಮನೆಯವರ ಒಪ್ಪಿಗೆ ಪಡೆದು ತನ್ನ ಅಣ್ಣನ ಜೊತೆ ಮದುವೆ ಮಾಡಿ ಮನೆ ತುಂಬಿಸಿಕೊಳ್ಳುತ್ತಾಳೆ. ಇವರಿಬ್ಬರ ಸ್ನೇಹ ನೋಡಿ ಸಹಿಸದ ಆರತಿಯ ಅಕ್ಕ ಇಬ್ಬರ ಮಧ್ಯದಲ್ಲಿ ಹುಳಿ ಹಿಂಡಲು ಸಮಯ ಕಾಯುತ್ತಾ ಇರುತ್ತಾಳೆ. ಆರತಿ ಅಣ್ಣನು ಸಣ್ಣ ಕೆಲಸಕ್ಕೆ ಸೇರಿ ತಂಗಿಯ ಜೊತೆ ಮನೆ ಕಷ್ಟಕ್ಕೆ ಕೈ ಜೋಡಿಸುತ್ತಾನೆ . ಅನಿತಾಳು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಸಿ ಮನೆ ಮನೆಗೆ ತೆರಳಿ ಮಾರಾಟ ಮಾಡಿ ತಾನೂ ಪತಿ ಹಾಗೂ ಗೆಳತಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಮದುವೆಯಾದ ವರುಷಕೆ ಅನಿತಾ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಕಷ್ಟದಲ್ಲೂ ಆರತಿ ತನ್ನ ಅಕ್ಕನಿಗೆ ಒಳ್ಳೆ ಕಡೆ ಸಂಬಂಧ ಹುಡುಕಿ ಮದುವೆ ಮಾಡಿ ಕೊಡುತ್ತಾಳೆ.
ಆಥಿ೯ಕವಾಗಿ ಜೀವನ ಸ್ವಲ್ಪ ಸುಧಾರಿಸಿದ ಬಳಿಕ ಆರತಿ ಬ್ಯಾಂಕ್ ನಿಂದ ಸಾಲ ಪಡೆದುಕೊಂಡು ಮನೆ ಖರೀದಿ ಮಾಡುತ್ತಾಳೆ.
ತಾತ್ಕಾಲಿಕ ಶಿಕ್ಷಕ ವೃತ್ತಿಯಲ್ಲಿದ್ದ ಆರತಿಗೆ ಸರ್ಕಾರಿ ಶಾಲೆಯಲ್ಲಿ ಖಾಯಂ ಹುದ್ದೆ ಸಿಗುತ್ತದೆ. ಅದೇ ಹೊತ್ತಿಗೆ ಅನಿತಾ ಹೆಣ್ಣು ಮಗುವಿನ ತಾಯಿಯಾಗುತ್ತಾಳೆ. ಆರತಿ ತಾನು ಮದುವೆ ಆಗೋ ಬಗ್ಗೆ ಆಲೋಚನೆ ಮಾಡುತ್ತಾಳೆ. ತನ್ನ ಸಹೋದ್ಯೋಗಿ ರಾಮ್ ಜೊತೆಗಿನ ಸ್ನೇಹ ಪ್ರೇಮವಾಗಿ ತಿರುಗಿರುತ್ತದೆ. ಆದರೆ ರಾಮ್ ಗೆ ಮಾತ್ರ ಆರತಿಗಿಂತ ಅವಳ ಆಸ್ತಿ ಮೇಲೆ ಕಣ್ಣಿರುತ್ತದೆ.
ಮುಂದುವರಿಯುವುದು…..
#Ebbanikaragiddaga #serial







