ವಿವಿಧ ಗ್ರಾಮಪಂಚಾಯಿತಿಗಳಲ್ಲಿ 314 ಸ್ಥಾನಗಳಿಗೆ ಚುನಾವಣೆ… ಮೇ 20 ರಂದು ಮತದಾನ
ಇದೇ ಜುಲೈ ಒಳಗೆ ಅವಧಿ ಮುಕ್ತಾಯವಾಗುವ ನಾಲ್ಕು ಗ್ರಾಮ ಪಂಚಾಯಿತಿಗಳ 105 ಸ್ಥಾನಗಳು ಮತ್ತು ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ 209 ಸದಸ್ಯ ಸ್ಥಾನಗಳಿಗೆ ಮೇ 20 ರಂದು ಚುನಾವಣೆ ನಡೆಯಲಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಮೇ 20, 2022 ಶುಕ್ರವಾರದಂದು ಮತದಾನ ನಡೆಯಲಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾಯಂ ಅಥವಾ ದಿನಗೂಲಿ ಮೇಲೆ ಕರ್ತವ್ಯ ನಿರ್ವಹಿಸುವ ಅರ್ಹ ಮತದಾರ ನೌಕರರಿಗೆ ಮೇ 20 ರಂದು ಮತದಾನ ಮಾಡಲು ರಜೆ ನೀಡಬೇಕು ಎಂದು ಸರ್ಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಹೇಳಿದ್ದಾರೆ








