ವಿದ್ಯುತ್ ಸ್ಪರ್ಶದಿಂದ ಕಾಡಾನೆ ಬಲಿ
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟಿದೆ.
ಭಾನುವಾರ ಸುರಿದ ಭಾರೀ ಮಳೆಗೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ಬಳಿಯ ಅರೆಕಾಡು ರಸ್ತೆಯಲ್ಲಿರುವ ವಿವೇಕ್ ಅಪ್ಪಯ್ಯರವರ ಕಾಫಿ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬವು ಸಹಿತ ಮುರಿದು ಬಿದ್ದಿದೆ.
ಈ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ 22 ವರ್ಷದ ಗಂಡಾನೆ ಸ್ಥಳದಲ್ಲೇ ಸಾವನ್ನಪ್ಪಿದೆ. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದುರ್ವಾಸನೆ ಬಂದಿದ್ದು ಕಾಫಿ ತೋಟದಲ್ಲಿ ಪರಿಶೀಲಿಸಿದಾಗ ಕಾಡಾನೆಯ ಮೃತದೇಹ ಪತ್ತೆಯಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ ಎನ್ ಎನ್ ಮೂರ್ತಿ, ಡಿ ಸಿ ಎಫ್ ಪೂವಯ್ಯ, ಎ ಸಿ ಎಫ್ ನೆಹರೂ, ಪಶುವೈದ್ಯಾದಿಕಾರಿ ಡಾ ಚೆಟ್ಟಿಯಪ್ಪ, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಕನ್ನಂಡ ರಂಜನ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.