ENG v IND 1st ODI : ಬುಮ್ರಾ ಬೆಂಕಿ ದಾಳಿ : ಭಾರತಕ್ಕೆ 10 ವಿಕೆಟ್ ಜಯ
ಬೂಮ್ ಬೂಮ್ ಬುಮ್ರಾ ಬೆಂಕಿ ಬೌಲಿಂಗ್ ದಾಳಿಯ ನೆರವನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಅದರಂತೆ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್ ತಂಡಕ್ಕೆ ಬುಮ್ರಾ ಆಘಾತ ನೀಡಿದರು.
ಟೀಂ ಇಂಡಿಯಾದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರ ಪಡೆ, 25.2 ಓವರ್‌ಗಳಲ್ಲಿ ಕೇವಲ 110 ರನ್‌ಗಳಿಗೆ ಸರ್ವಪತನ ಕಂಡಿತು.
ಟಾರ್ಗೆಟ್ ಬೆನ್ನತ್ತಿದ ಭಾರತ 18.4 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್‌ಗಳಿಸುವ ಮೂಲಕ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಭಾರತೀಯ ಬೌಲರ್ ಗಳು ದುಸ್ವಪ್ನವಾದರು.
ಟಾಪ್ ಆರ್ಡರ್ ನ ನಾಲ್ವರು ಬ್ಯಾಟರ್ ಗಳು ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು.
ಪರಿಣಾಮ 25 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ನಾಯಕ ಜೋಸ್ ಬಟ್ಲರ್(30) ಹಾಗೂ ಮೂಯಿನ್ ಅಲಿ(14) ತಂಡಕ್ಕೆ ಸ್ವಲ್ಪಮಟ್ಟಿನ ಚೇತರಿಕೆ ನೀಡಿದರು.
ಉಳಿದಂತೆ ಇನ್ನಿಂಗ್ಸ್ ಕೊನೆಯಲ್ಲಿ ಡೇವಿಡ್ ವಿಲ್ಲಿ(21), ಓವರ್ಟನ್(8), ಬ್ರೈಡನ್ ಕಾರ್ಸ್(15) ಹಾಗೂ ಟಾಪ್ಲೆ(6) ಉಪಯುಕ್ತ ರನ್‌ಗಳಿಸಿದರು.
ಭಾರತದ ಪರ ಮಿಂಚಿನ ದಾಳಿ ನಡೆಸಿದ ಬುಮ್ರಾ 19 ರನ್ ನೀಡಿ ಆರು ವಿಕೆಟ್ ಪಡೆದರು.
ಶಮಿ ಮೂರು ವಿಕೆಟ್ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದರು.
ಅತಿಥೇಯರನ್ನ 110 ರನ್‌ಗಳ ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಭಾರತ, ಬ್ಯಾಟಿಂಗ್‌ನಲ್ಲೂ ಅಬ್ಬರಿಸಿತು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ 76* ರನ್(58 ಬಾಲ್, 6 ಬೌಂಡರಿ, 5 ಸಿಕ್ಸ್) ಮೂಲಕ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದರು.
ಇವರಿಗೆ ಸಾಥ್ ನೀಡಿದ ಶಿಖರ್ ಧವನ್(31*) ಉತ್ತಮ ಆಟವಾಡಿದರು.
ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ, ಶತಕದ ಜೊತೆಯಾಟದ ಮೂಲಕ 114 ರನ್‌ಗಳಿಸಿ ತಂಡವನ್ನ ಗೆಲುವಿನ ದಡಸೇರಿಸಿದರು.