ಹೆಣ್ಣುಮಕ್ಕಳಿಗಾಗಿ 100 ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ ಸಿಂಗ್
ನವದೆಹಲಿ: ಭಾರತೀಯ ಸಶಸ್ತ್ರಪಡೆಯು ಜಗತ್ತಿನ ಬಲಿಷ್ಠ ಸಶಸ್ತ್ರಪಡೆಗಳಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಈ ಸಶಸ್ತ್ರಪಡೆಯಲ್ಲಿ ಹೆಣ್ಣು ಮಕ್ಕಳು ಸೇರಲು ಸೈನಿಕ ತರಬೇತಿ ಶಾಲೆಗಳನ್ನು ತರೆಯಲಾಗುತ್ತದೆ ಎಂದು ಸೈನಿಕ ಶಾಲೆಗಳ ವೆಬಿನಾರ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಸಶಸ್ತ್ರಪಡೆಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಲು 100 ಸೈನಿಕ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು ಶೀಘ್ರದಲ್ಲೆ ಶಾಲೆಗಳು ಪ್ರಾರಂಭವಾಗಲಿವೆ, ಮಹಿಳೆಯರ ಹಾದಿಯನ್ನು ಸುಗಮಗೊಳಿಸಲು ಸೈನಿಕ ಶಾಲೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
‘ಸೈನಿಕ’ ಏಕತೆ, ಶಿಸ್ತು ಮತ್ತು ಭಕ್ತಿಯನ್ನು ಸೂಚಿಸಿದರೆ, ‘ಶಾಲೆ’ ಶಿಕ್ಷಣದ ಕೇಂದ್ರವಾಗಿದೆ. ಆದ್ದರಿಂದ ಸೈನಿಕ ಶಾಲೆಗಳು ಮಕ್ಕಳನ್ನು ಸಮರ್ಥ ನಾಗರಿಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ನಿರ್ಧಾರವು ದೇಶಕ್ಕೆ ಸೇವೆ ಸಲ್ಲಿಸುವ ತಮ್ಮ ಕನಸುಗಳನ್ನು ನನಸಾಗಿಸಲು ಮಹಿಳೆಯರನ್ನು ಉತ್ತೇಜಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.