ಯೂರೋ ಕಪ್ 2021- ನೆದರ್ಲೆಂಡ್, ಆಸ್ಟ್ರೀಯಾ, ಇಂಗ್ಲೆಂಡ್ ಗೆ ಜಯ
ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 1-0 ಗೋಲುಗಳಿಂದ ಕ್ರೋವೇಶಿಯಾ ತಂಡವನ್ನು ಪರಾಭವಗೊಳಿಸಿತ್ತು. ಈ ಮೂಲಕ ಲೀಗ್ ನಲ್ಲಿ ಇಂಗ್ಲೆಂಡ್ ತಂಡ ಶುಭಾರಂಭ ಮಾಡಿದೆ.
ಪಂದ್ಯದ ಮೊದಲಾರ್ಧದಲ್ಲಿ ಇಂಗ್ಲೆಂಡ್ ಮತ್ತು ಕ್ರೋವೇಶಿಯಾ ತಂಡಗಳು ಸಮಬಲದ ಹೋರಾಟವನ್ನು ನಡೆಸಿದ್ದವು. ಆದ್ರೆ ದ್ವಿತೀಯಾರ್ಧದಲ್ಲಿ ಕ್ರೋವೇಶಿಯಾ ತಂಡದ ರಕ್ಷಣಾ ಕೋಟೆಯನ್ನು ಮುರಿಯಲು ಇಂಗ್ಲೆಂಡ್ ತಂಡ ಯಶಸ್ವಿಯಾಯ್ತು. ಪಂದ್ಯದ 57ನೇ ನಿಮಿಷದಲ್ಲಿ ರಹೀಮ್ ಸ್ಟಿರ್ಲಿಂಗ್ ಅವರು ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು.
ಇನ್ನು ಸಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ ತಂಡ 3- 2 ಗೋಲುಗಳಿಂದ ಉಕ್ರೇನ್ ತಂಡವನ್ನು ಸೋಲಿಸಿತ್ತು.
ರೋಚಕವಾಗಿ ಸಾಗಿದ ಈ ಪಂದ್ಯದಲ್ಲೂ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ವಿಫಲವಾದವು.
ಆದ್ರೆ ದ್ವಿತೀಯಾರ್ಧದಲ್ಲಿ ಗೆಲುವಿಗಾಗಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಪಂದ್ಯದ 52ನೇ ನಿಮಿಷದಲ್ಲಿ ನೆದರ್ಲೆಂಡ್ ತಂಡದ ಗೆರ್ಗೊನಿಯೊ ಜಿನಾಲ್ಡಮ್ ಮತ್ತು 58ನೇ ನಿಮಿಷದಲ್ಲಿ ವಾಟ್ ವೆಗೋಸ್ರ್ಟ್ ಅವರು ಗೋಲು ದಾಖಲಿಸಿ ಅಂತರವನ್ನು 2-0ಕ್ಕೇರಿಸಿದ್ರು.
ಆದ್ರೆ ಈ ಅಂತರವನ್ನು ಕಾಯ್ದುಕೊಳ್ಳಲು ನೆದರ್ಲೆಂಡ್ ತಂಡ ವಿಫಲವಾಯ್ತು. ಪಂದ್ಯದ 75ನೇ ನಿಮಿಷದಲ್ಲಿ ಉಕ್ರೇನ್ ನ ಆಂಡ್ರಿ ಯಮೊಲೆಂಕೊ ಮತ್ತು 79ನೇ ನಿಮಿಷದಲ್ಲಿ ರೊಮನ್ ಯರೆಮುಚುಕ್ ಅವರು ಗೋಲು ದಾಖಲಿಸಿ ಅಂತರವನ್ನು ಸಮಗೊಳಿಸಿದ್ರು.
ಕೊನೆ ಗಳಿಗೆಯಲ್ಲಿ ನೆದರ್ಲೆಂಡ್ ತಂಡ ಡೆಂಝಿಲ್ ಡುಮ್‍ಫ್ರೀಸ್ ಅವರು 85ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು.
ಸಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೀಯಾ ತಂಡ 3-1 ಗೋಲುಗಳಿಂದ ನಾರ್ತ್ ಮೆಕ್‍ಡೋನಿಯಾ ತಂಡವನ್ನು ಮಣಿಸಿತ್ತು. ಆಸ್ಟ್ರೀಯಾ ತಂಡದ ಪರ ಸ್ಟಿಫನ್ ಲೈನರ್, ಮೈಕೆಲ್ ಮತ್ತು ಮಾರ್ಕೋ ಅವರು ಗೋಲು ದಾಖಲಿಸಿದ್ರೆ, ನಾರ್ತ್ ಮೆಕ್‍ಡೋನಿಯಾ ತಂಡದ ಪರ ಗೊರನ್ ಪಾಂಡೇವ್ ಅವರು ಏಕೈಕ ಗೊಲು ದಾಖಲಿಸಿದ್ರು. ಈ ಗೆಲುವಿನ ಮೂಲಕ ಆಸ್ಟ್ರೀಯ ತಂಡ ಯೂರೋ ಕಪ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತ್ತು. ಅಲ್ಲದೆ 1990ರ ವಿಶ್ವಕಪ್ ನಂತರ ಮಹತ್ವದ ಪಂದ್ಯದಲ್ಲಿ ಮೊದಲ ಜಯ ಸಾಧಿಸಿದ ಹೆಗ್ಗಳಿಕೆಯನ್ನು ಉಕ್ರೇನ್ ಪಡೆದುಕೊಂಡಿತು.








