ಯೂರೋ ಕಪ್ 2021 -ಬೆಲ್ಜಿಯಂ ಗೆ ಆಘಾತ… ಸ್ವೀಜರ್ ಲೆಂಡ್ ಗೆ ನಿರಾಸೆ.. ಸೆಮೀಸ್ ಗೆ ಎಂಟ್ರಿಯಾದ ಇಟಲಿ, ಸ್ಪೇನ್…!
2021ರ ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಇಟಲಿ ಮತ್ತು ಸ್ಪೇನ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಅಲ್ಲದೆ ಜುಲೈ 7ರಂದು ನಡೆಯಲಿರುವ ಮೊದಲ ಸೆಮಿಫೈನಲ್ ನಲ್ಲಿ ಕಾದಾಟವನ್ನು ಕೂಡ ನಡೆಸಲಿವೆ.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಸ್ವೀಜರ್ ಲೆಂಡ್ ತಂಡವನ್ನು ಸೋಲಿಸಿತು.
ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು. ನಂತರ ಹೆಚ್ಚುವರಿ ಆಟದಲ್ಲೂ ಫಲಿತಾಂಶ ಬರಲಿಲ್ಲ. ಹೀಗಾಗಿ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ನಿರ್ಧರಿಸಲಾಯ್ತು. ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ 3-1 ಗೋಲುಗಳಿಂದ ಸ್ವಿಜರ್ ಲೆಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಇನ್ನೊಂದು ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂಬರ್ ವನ್ ತಂಡವಾಗಿರುವ ಬೆಲ್ಜಿಯಂ ಆಘಾತ ಅನುಭವಿಸಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಬೆಲ್ಜಿಯಂ 1-2 ಗೋಲುಗಳಿಂದ ಇಟಲಿ ತಂಡಕ್ಕೆ ಶರಣಾಗಿತ್ತು.
ಇಟಲಿ ತಂಡದ ಪರ ನಿಕೊಲಾಸ್ ಬಾರೆಲ್ಲಾ ಮತ್ತು ಲೊರೆಂಝೊ ಇನ್ ಸಿಗ್ನೆ ಅವರು ಗೋಲು ದಾಖಲಿಸಿ ತಂಡ ಗೆಲುವಿನ ರೂವಾರಿಗಳಾದ್ರು. ಹಾಗೇ ಬೆಲ್ಜಿಯಂ ತಂಡದಿಂದ ರೊಮೆಲೂ ಲುಕಾಕು ಏಕೈಕ ಗೋಲು ದಾಖಲಿಸಿದ್ರು. ಆದ್ರೆ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ಅವರಿಂದ ಸಾಧ್ಯವಾಗಲಿಲ್ಲ.
ಇಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೆಕ್ ಗಣರಾಜ್ಯ ಮತ್ತು ಡೆನ್ಮಾರ್ಕ್ ತಂಡಗಳು ಕಾದಾಟ ನಡೆಸಿದ್ರೆ, ಇನ್ನೊಂದು ಕ್ವಾರ್ಟರ್ ಫೈನಲ್ ನಲ್ಲಿ ಇಂಗ್ಲೆಂಡ್ ಮತ್ತು ಉಕ್ರೇನ್ ತಂಡಗಳು ಮುಖಾಮುಖಿಯಾಗಲಿವೆ.