ಹಾಸನ : ದೇವೇಗೌಡ (HD Devegowda) ಅವರು ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ನಾನು ಸಮ್ಮತಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಈಗಾಗಲೇ ದೇವೇಗೌಡರ ಬಳಿ ಹೇಳಿದ್ದೇನೆ. ಅದು ನಮ್ಮಿಬ್ಬರಿಗೇ ಗೊತ್ತು. ದೇವೇಗೌಡರೇ ನಮಗೆ ಸುಪ್ರೀಂ ನಾಯಕರು. ಅವರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ ದೇವೇಗೌಡರು ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುತ್ತೇನೆ ಎಂದು ಹೇಳಿದರೂ ನಮ್ಮ ಸಮ್ಮತಿ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ (Congress) ನಾಯಕರ ಜೊತೆ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ (Siddaramaiah) ಮತ್ತು ನನ್ನ ನಡುವಿನ ಬಾಂಧವ್ಯ ಬೇರೆ. ದೇವೇಗೌಡರು, ಕುಮಾರಣ್ಣ ಇಲ್ವಾ? ನಾನೇಕೆ ಕಾಂಗ್ರೆಸ್‌ಗೆ ಹೊಗಲಿ? ಹಾಸನ ಟಿಕೆಟ್ ವಿಚಾರದಲ್ಲಿ ಯಾವ ಗೊಂದಲವೂ ನಮ್ಮಲ್ಲಿ ಇಲ್ಲ. ನಾವಿಬ್ಬರೂ ಮೊದಲೇ ಮಾತನಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಹಾಸನದಲ್ಲಿ ಶಕುನಿಗಳು ತಲೆಕೆಡಿಸುತ್ತಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಶಕುನಿಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ. ಯಾರೂ ನನ್ನ-ಕುಮಾರಣ್ಣನನ್ನು ಹೊಡೆದು ಓಡಿಸಲು ಸಾಧ್ಯವಿಲ್ಲ. ನಾವಿಬ್ಬರು ಬೆಳಗಾಗುವುದರೊಳಗೆ ಒಂದಾಗುತ್ತೇವೆ ಎಂದು ಹೇಳಿದ್ದಾರೆ.








