ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ: ಮಹಿಳೆಯರಲ್ಲಿ ಆತಂಕ
ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಹಲವು ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಗಣೇಶ ಹಬ್ಬಕ್ಕೆ ಹಣ ಸಿಗಬಹುದು ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದ್ದು, ಹಣ ಯಾವಾಗ ಬರುತ್ತದೆ ಎಂದು ಫಲಾನುಭವಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪ್ರತಿ ತಿಂಗಳು ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ 2,000 ರೂ. ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಹಣ ಪಾವತಿಯಲ್ಲಿ ವಿಳಂಬವಾಗುತ್ತಿದ್ದು, ಸರ್ಕಾರವು ತಾಂತ್ರಿಕ ದೋಷ ಹಾಗೂ ಇತರೆ ಕಾರಣಗಳನ್ನು ನೀಡುತ್ತಿದೆ. ಇದರಿಂದ ಸರ್ಕಾರದ ವಿರುದ್ಧ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಮಹಿಳೆಯರು ಗಣೇಶ ಹಬ್ಬಕ್ಕೆ ಈ ಹಣ ನೆರವಾಗಬಹುದು ಎಂದು ಭಾವಿಸಿದ್ದರು. ಆದರೆ, ಹಣ ಜಮೆಯಾಗದ ಕಾರಣ ಹಬ್ಬವನ್ನು ಸಡಗರದಿಂದ ಆಚರಿಸಲು ಸಾಧ್ಯವಾಗಲಿಲ್ಲ.
ಎರಡು ತಿಂಗಳ ಹಣ ಒಟ್ಟಿಗೆ ಜಮೆಯಾಗುವ ನಿರೀಕ್ಷೆ
ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಬಾಕಿ ಇರುವ ಎರಡು ತಿಂಗಳ ಕಂತಿನ 4,000 ರೂ. ಹಣವನ್ನು ಈ ವಾರದ ಅಂತ್ಯದೊಳಗೆ ಒಟ್ಟಿಗೆ ಜಮೆ ಮಾಡುವ ಸಾಧ್ಯತೆ ಇದೆ. ಆದರೆ, ಹಣ ಖಾತೆಗೆ ಜಮೆಯಾದ ನಂತರವೇ ನಿಟ್ಟುಸಿರು ಬಿಡುತ್ತೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಯೋಜನೆಯ ನಿರಂತರ ಪಾವತಿಯ ಬಗ್ಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕೆಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.








