ಢಾಕಾ: ಬಾಂಗ್ಲಾದೇಶದ (Bangladesh) ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಮೀಸಲಾತಿ ವಿರೋಧಿಸಿ ನಡೆದ ಸಣ್ಣ ಹೋರಾಟ ಜ್ವಾಲೆಯಂತೆ ಪ್ರಜ್ವಲಿಸಿ ಹಿಂಸಾಚಾರ ರೂಪ ಪಡೆದಿದೆ. 300ಕ್ಕೂ ಅಧಿಕ ಜನರನ್ನು ಆ ಹೋರಾಟ ಬಲಿ ಪಡೆದಿದೆ. ಪರಿಣಾಮವಾಗಿಯೇ ಪ್ರಧಾನಿ ಶೇಕ್ ಹಸೀನಾ (Sheikh Hasina) ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಆದರೂ ಅಲ್ಲಿನ ಹಿಂಸಾಚಾರ ಮಾತ್ರ ಇನ್ನೂ ನಿಲ್ಲುತ್ತಿಲ್ಲ.
ಹಸೀನಾ ಅವರು ದೇಶ ತೊರೆದ ನಂತರವೂ ಪುಂಡರ ಅಟ್ಟಹಾಸ ಮುಂದುವರೆದಿದೆ. ಪ್ರತಿಭಟನಾಕಾರರು ಬಾಂಗ್ಲಾದ ಮಾಜಿ ಕ್ರಿಕೆಟಿಗ, ಮತ್ತು ಸಂಸದ ಮಶ್ರಫೆ ಮೊರ್ತಾಜಾ (Mashrafe Mortaza) ಮನೆಗೆ ಬೆಂಕಿ ಹಚ್ಚಿದ್ದಾರೆ.
ಮಶ್ರಫ್-ಬಿನ್-ಮೊರ್ತಾಜಾ ಅವರು ಶೇಕ್ ಹಸಿನಾ ಅವರ ಪಕ್ಷವಾದ ಅವಾಮಿ ಲೀಗ್‌ನಿಂದ ಖುಲ್ನಾ ವಿಭಾಗದ ನರೈಲ್ ಕ್ಷೇತ್ರದ ಸಂಸದರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದರು. ಹೀಗಾಗಿಯೇ ಆಕ್ರೋಶಗೊಂಡ ದುಷ್ಕರ್ಮಿಗಳು ಮಶ್ರಫ್ ಮನೆಗೂ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಮೊರ್ತಾಜಾ ಬಾಂಗ್ಲಾದೇಶ ಪರ 117 ಕ್ರಿಕೆಟ್ ಪಂದ್ಯಗಳನ್ನಾಡಿ ನಿವೃತ್ತಿ ಹೊಂದಿದ್ದಾರೆ. ಅಂತರರಾಷ್ಟ್ರಿಯ ಕ್ರಿಕೆಟ್‌ನಲ್ಲಿ 390 ವಿಕೆಟ್ ಗಳಿಸಿ 2,955 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಅವರು ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ರಾಜಕೀಯ ಪ್ರವೇಶಿಸಿದ್ದರು. ರೈಲ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಪುಂಡರು ಢಾಕಾದಲ್ಲಿನ ಅವಾಮಿ ಲೀಗ್ ಪಕ್ಷದ ಕಚೇರಿಗೂ ಕೂಡ ಬೆಂಕಿ ಹಚ್ಚಿದ್ದು, ಸುಭಾಷ್ ಚಂದ್ರ ಭೋಸ್ ಹೌಸ್ ಧ್ವಂಸ ಮಾಡಿದ್ದಾರೆ. ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಲ್ಲದೇ, ಮನೆಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸದ್ಯ ಅಲ್ಲಿ ಮಿಲಿಟರಿ ಆಡಳಿತವಿದ್ದು, ಪರಿಸ್ಥಿತಿ ಯಾವಾಗ ಹತೋಟಿಗೆ ಬರುತ್ತದೆ ಎಂಬುವುದನ್ನು ಕಾಯ್ದ ನೋಡಬೇಕಿದೆ.