ಬೆಂಗಳೂರು : ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಅಂತರ್ ಜಿಲ್ಲಾ ಸಂಚಾರ್ ಬಂದ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಜ್ಞರ ಸಮಿತಿ ಸಲಹೆ ನೀಡಿದೆ. ರಾಜ್ಯದಲ್ಲಿ ಕೊರೊನಾಸುರ ರಣಕೇಕೆ ಹಾಕುತ್ತಿದ್ದಾನೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ತನ್ನ ಕದಂಬ ಬಾಹು ಚಾಚುತ್ತಿದೆ. ಕೊರೊನಾ ನಿಯಂತ್ರಣ ಮಾಡುವುದಕ್ಕೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರಣಿ ಸಭೆ ನಡೆಸಿ ಅಧಿಕಾರಗಳ, ಶಾಸಕರ, ಸಂಸದರ ಅಭಿಪ್ರಾಯ ಸಂಗ್ರಹಿಸಿದ್ದರು.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ತಜ್ಞರ ಸಮಿತಿ ಭೇಟಿ ಮಾಡಿ ವರದಿ ಸಲ್ಲಿಸಿದೆ. ತಜ್ಞರ ನೀಡಿದ ವರದಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಅಂತರ್ ಜಿಲ್ಲಾ ಸಂಚಾರ ಬಂದ್ ಮಾಡಬೇಕು. ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೋಗುವವರು ಮತ್ತು ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರಿಗೆ ನಿರ್ಬಂಧ ಹಾಕಲು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ಅಲ್ಲದೆ ರೋಗ ಲಕ್ಷಣ ಇಲ್ಲದ ಕೊರೊನಾ ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಬೇಕು. ಮನೆಯಲ್ಲಿ ಐಸೊಲೇಷನ್ ಮಾಡಬೇಕು., ಖಾಸಗಿ ಕಾಲೇಜುಗಳಲ್ಲಿ ಬೆಡ್ ವ್ಯವಸ್ಥೆ ಮಾಡಬೇಕು. ಜೊತೆಗೆ ಬೆಂಗಳೂರಿನಲ್ಲಿ 200 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂಬು ಸೇರಿದಂತೆ ಇನ್ನೂ ಕೆಲಸ ಸಲಹೆಗಳನ್ನು ಸರ್ಕಾರ ತಜ್ಞರ ಸಮಿತಿ ಸದಸ್ಯರು ನೀಡಿದ್ದಾರೆ.