exploration ಅನ್ನುವುದು ಒಳಮನಸ್ಸಿನ ಪ್ರೇರಣೆ

1 min read
Exploration is curiosity put into action saakshah tv

Exploration is curiosity put into action” -Don Walsh

ಕಣ್ಣಳತೆಯನ್ನೂ ಮೀರಿದ ಯಾವುದೇ ಸ್ಥಳ, ವಸ್ತು, ವಿಷಯದ ಬಗ್ಗೆ ಕುತೂಹಲ ಸಹಜ.. ಅಲ್ಲೇನಿರಬಹುದು, ಅದರಲ್ಲೇನಿರಬಹುದು, ತಿಳಿದುಕೊಳ್ಳುವ ಆಸಕ್ತಿ ಆ ಕಡೆಗೆ ತುಡಿಯುವಂತೆ ಮಾಡುತ್ತದೆ.

ನಮ್ಮೊಳಗಿನ ಆ ಕುತೂಹಲ ತಣಿಸಬೇಕೆಂದಿದ್ದರೆ, ಅನ್ವೇಷಣೆ ಮಾಡಲೇಬೇಕು… ಅದಕ್ಕೆ ತಾನೇ, ಕೆಲ್ಸ ಕಾರ್ಯನೆಲ್ಲಾ ಮೂಟೇಲಿ ಕಟ್ಟಿ, ಸೈಡಿಗಿಟ್ಟು, ಊರೂರು ಅಲೆದಾಡುವುದು! ಅಂತಹ ಆಸಕ್ತಿ ಇಲ್ಲದವರ ಪಾಲಿಗೆ ಅವರು ಕೆಲಸವಿಲ್ಲದವರಷ್ಟೆ.!! ಅವರೊಳಗಿನ ತುಡಿತ, ಸುತ್ತಾಟದ ದಾಹ, ಅನ್ವೇಷಣೆಯ ನ‌ಶೆ ಇವೆಲ್ಲ ಎಲ್ಲರಿಗೂ ಅರ್ಥವಾಗುವಂತದ್ದಲ್ಲ.

ಹತ್ತು, ಹದಿನೈದು ವರ್ಷಗಳ ಹಿಂದೆ ಹೆಣ್ಣುಮಕ್ಕಳ ಪಾಲಿಗೆ ಸೋಲೋ ಟ್ರಿಪ್ ಆಗಿನ್ನೂ ಹೊಸದು.! ಓದು, ಉದ್ಯೋಗವೆಂದು, ಬಸ್ಸು ಹತ್ತಿ, ಊರು ಬಿಟ್ಟು ಊರನ್ನು ಸೇರಿಕೊಂಡಿದ್ದೇ ಹೆಚ್ಚು.. ಅದಕ್ಕೂ ಮೊದಲು ಹಳ್ಳಿಗಳಲ್ಲಂತೂ ಹದಿನೇಳು, ಇಪ್ಪತ್ತು ಕಿ.ಮೀ ದೂರದ ಸಿಟಿಗೆ ಹೋಗಬೇಕಾದರೂ ಅಮ್ಮನೋ, ಅಪ್ಪನೋ, ಅಣ್ಣ-ತಮ್ಮಂದಿರೋ ಜೊತೆಗೆ ಇರಲೇಬೇಕು.. ದಿನಾ ಶಾಲಾ ಕಾಲೇಜಿಗೆ ಸಿಟಿಗೆ ಹೋಗುವವರಿದ್ದರೆ, ಬಸ್ಸನ್ನೇ ಅಲಂಬಿಸುತ್ತಿದ್ದರು.. ಜೀಪುಗಳಲ್ಲಿ ಡ್ರೈವರ್ ಪಕ್ಕ ಕೂರಿಸಿಕೊಂಡು ಕೀಟಲೆ ಮಾಡುತ್ತಾನೆ ಅನ್ನೋ ದೂರುಗಳು ಹೇರಳವಾಗಿರುತ್ತಿದ್ದವು!! ಇಂಥ ಅನುಭವಗಳು, ಹೆತ್ತವರಿಗೂ ಹೆಣ್ಣುಮಕ್ಕಳ ಬಗ್ಗೆ ಕಾನ್ಶಿಯಸ್ ಆಗುವ ಹಾಗೆ ಮಾಡುತ್ತಿದ್ದವು.. ಆಗೆಲ್ಲಾ ಓದು, ಉದ್ಯೋಗ ಎಂದು ದೂರದ ಊರು ಸೇರಿಕೊಂಡವರೆಂದರೆ ಸಿಕ್ಕಾಪಟ್ಟೆ ಬೋಲ್ಡ್!!

ನಮ್ಮಲ್ಲಿ ಅಂಥಹ ಭಯದ, ರಿಸ್ಟ್ರಿಕ್ಷನ್ ಇಲ್ಲದ ವಾತಾವರಣ ಇದ್ದಿದ್ದರಿಂದ, ಪದವಿ, ಪಿಜಿಯೆಂದು, ದೂರದ ಊರು, ಯಾವತ್ತೂ ಕಂಡಿರದ ದೂರದ ಜಿಲ್ಲೆ ಸೇರಿಕೊಳ್ಳುವ ಹಾಗಾಯಿತು.. ಅದೇ ನನ್ನೊಳಗಿನ exploration ಅನ್ವೇಷಣೆಯ ದಾಹವನ್ನು ಪೊರೆದಿದ್ದು.

Exploration is curiosity put into action saakshah tv

ಇತ್ತೀಚೆಗೆ ನನ್ನ ಜೂನಿಯರ್ ಒಬ್ಬಳು ತನ್ನ ಸೋಲೋ ಟ್ರಿಪ್ ಅನುಭವದ ಬಗ್ಗೆ ಇಲ್ಲಿ ಬರೆದುಕೊಂಡಿದ್ದಳು. ಅದನ್ನು ಓದಿದಾಗ ನನಗೆ ಅವಳ ಬಗ್ಗೆ ಅಸೂಯೆಯಾಗಿದ್ದು ನಿಜ.. ನಾವು ಓದುವಾಗ ಎಲ್ಲಾ ಇಂಥ ಸೋಲೋ ಟ್ರಿಪ್ ಕಾನ್ಸೆಪ್ಟ್ ಇರ್ಲಿಲ್ಲ. ಎಷ್ಟೊಂದು ಚಾನ್ಸ್ ಮಿಸ್ ಮಾಡಿಕೊಂಡೆ ಎಂದು ಅವಳ ಜೊತೆ ಹೇಳಿಕೊಂಡಿದ್ದೆ..
ಸೋಲೋಟ್ರಿಪ್ ಹೋಗದಿದ್ದರೂ ಕಾಲೇಜು ಟ್ರಿಪ್ ನೆಪದಲ್ಲಿ ಅರ್ಧ ದೇಶವನ್ನೇ ಸುತ್ತಿದ್ದು ಬೇರೆ ಮಾತು.. ಆದರೆ ಸೋಲೋ ಟ್ರಿಪ್ ನ ಖುಷಿಯೇ ಬೇರೆ ತಾನೆ.

ಶಿವಮೊಗ್ಗ ಕುವೆಂಪು ಯುನಿವರ್ಸಿಟಿಯಲ್ಲಿ ಓದುತ್ತಿದ್ದಾಗ, ನಾನು ಒಂದರ್ಥದಲ್ಲಿ ಪ್ರತಿ ತಿಂಗಳು ಸೋಲೋ ಟ್ರಿಪ್ ‌ಮಾಡುತ್ತಿದ್ದೆ. ಶಿವಮೊಗ್ಗದ ಶಂಕರಘಟ್ಟದಿಂದ ಸುಮಾರು ಮುನ್ನೂರು ಕಿಮೀ ದೂರದಲ್ಲಿದ್ದ ನನ್ನೂರಿಗೆ ಪ್ರತಿ ತಿಂಗಳು ಬರುತ್ತಿದ್ದೆ.. ಎರಡು ವರ್ಷದಲ್ಲಿ ಕನಿಷ್ಠ ಇಪ್ಪತ್ತು ಸಾರಿಯಾದರೂ ಓಡಾಡಿರಬಹುದು.. ಪ್ರತಿಬಾರಿಯೂ ನಾನು ಹೋಗುತ್ತಿದ್ದ ರೂಟ್ ಮಾತ್ರ ಬೇರೆ ಬೇರೆ.. ನಾನು ಯಾವತ್ತೂ ಡೈರೆಕ್ಟ್ ಬಸ್ಸು ಹತ್ತುತ್ತಿರಲೇ ಇಲ್ಲ. ಅಲ್ಲಲ್ಲಿ ಇಳಿದು, ಇನ್ನೊಂದು ಬಸ್ ಹತ್ತುವ ಗ್ಯಾಪ್ ನಲ್ಲಿ, ಸುತ್ತಮುತ್ತ ಒಂದಿಷ್ಟು ಅಲೆದಾಡಿದರೆ, ಮನಸ್ಸಿಗೆ ಸಮಾಧಾನ.. ಬಸ್ಸಲ್ಲಿ ಹೋಗುವಾಗೆಲ್ಲಾ ಕತ್ತು ಕಿಟಿಕಿ ಬಿಟ್ಟು ಮಿಸುಕಾಡುತ್ತಿರಲಿಲ್ಲ. ಆಗಲೇ ನಾನು ಆಗುಂಬೆಯ ಸುಂದರ ಸೂರ್ಯಾಸ್ತ ನೋಡಿದ್ದು!! ಆಗುಂಬೆಯ ಎಡೆಬಿಡದೆ ಸುರಿಯುತ್ತಿದ್ದ ಮಳೆಗೆ ಮೂಕವಿಸ್ಮಿತಳಾಗಿದ್ದು. ಉಡುಪಿ, ಹೆಬ್ರಿ, ಹೊರನಾಡು, ಕಳಸ, ಚಿಕ್ಕಮಗಳೂರು, ಮೂಡಿಗೆರೆ, ಶಿರಾಡಿ ಘಾಟಿ, ಚಾರ್ಮಾಡಿ ಘಾಟಿಯಲ್ಲಿ ಓಡಾಡಿದ್ದು. ಒಮ್ಮೆ ಆಗುಂಬೆ ಘಾಟ್ ನಲ್ಲಿ ಬಸ್ ಕೆಟ್ಟು ಎರಡು, ಮೂರು ಗಂಟೆಗಳ ಕಾಲ, ಅಲ್ಲೇ ಸಮಯ ಕಳೆಯಬೇಕಾಗಿ ಬಂದಾಗ ಅದನ್ನೇ ಸಂಭ್ರಮಿಸಿದ್ದೆ.

ಶಂಕರ ಘಟ್ಟದಿಂದ ಕಡೂರು, ಬೀರೂರು ರೂಟ್ ಬಸ್ನಲ್ಲಿ ಹೋಗುವಾಗ ಮಹಿಳೆಯೊಬ್ಬರು ಪರಿಚಯವಾಗಿದ್ದರು. ಎಷ್ಟೋ ವರ್ಷಗಳ ಗೆಳೆತನವೇನೋ ಅನ್ನುವಂತೆ ನಾವಿಬ್ಬರೂ ಹರಟಿದ್ದೆವು. ಆಕೆ ಕಡೂರಿನಲ್ಲಿ ಇಳಿದಾಗ, ನಾನೂ ಬಸ್ ನಿಂದ ಇಳಿದಿದ್ದೆ. ಆಕೆ ನಮ್ಮ ಮನೆಗೆ ಬಂದು ಹೋಗಿ ಎಂದು ಒತ್ತಾಯಿಸಿದ್ದರು. ಸರಿ ಎಂದು ಆಕೆಯ ಜೊತೆ ಹೋದೆ. ನಾನು ಹೋದ ಮೇಲೆ ಉಪ್ಪಿಟ್ಟು ರೆಡಿ ಮಾಡಿ ಕೊಟ್ಟಿದ್ದರು.‌ ಅವರ ಜೊತೆ ಮಾತನಾಡುತ್ತಾ , ಒಂದು ಗಂಟೆ ಅಲ್ಲೇ ಕಳೆದು ಆಮೇಲೆ ಉಜಿರೆ ಬಸ್ ಹತ್ತಿದ್ದೆ. ಮನೆಗೆ ಬಂದು, ಅಮ್ಮನ ಬಳಿ, ಬಸ್ ನಲ್ಲಿ ಪರಿಚಯವಾಗಿದ್ದವರ ಮನೆಗೆ ಹೋಗಿ ಬಂದೆ ಎಂದಾಗ ಸ್ವಲ್ಪ ಬೈಗುಳ, ಬುದ್ಧಿಮಾತು ಕೇಳಬೇಕಾಯಿತು.

ಆ ಎರಡು ವರ್ಷಗಳ ನನ್ನ ಓಡಾಟ ಇಂಥದ್ದೇ ಅದೆಷ್ಟೋ ಸುಂದರ ಅನುಭವ ದಕ್ಕಿಸಿಕೊಟ್ಟಿತ್ತು.ನಮ್ಮ ಸುತ್ತಮುತ್ತಲೇ, ನಮ್ಮ ಕಣ್ಣಿಂದ ತಪ್ಪಿಸಿಕೊಂಡ, ಅನ್ವೇಷಣೆಗೆ ಅರ್ಹವಾದ ಅದೆಷ್ಟೋ ಜಾಗಗಳು ಇರುತ್ತವೆ.. ಬೆಟ್ಟ, ಗುಡ್ಡ, ಕಾಡು, ನದಿ ಇವೆಲ್ಲಾ!! ಬಾಲ್ಯದಲ್ಲೇ ಈ ಹುಚ್ಚಿನಿಂದ ನಾನು ಕಳೆದುಕೊಂಡದ್ದಕ್ಕಿಂತ ದಕ್ಕಿಸಿಕೊಂಡಿದ್ದೇ ಹೆಚ್ಚು. ಸುಬ್ರಹ್ಮಣ್ಯ ಕೈಕಂಬದ ಬಳಿ ಇರುವ ದೊಡ್ಡಮ್ಮನ ಮನೆ ರಜಾದಿನಗಳಲ್ಲಿ ನಮ್ಮ ಅಡ್ಡಾ.. ಅಲ್ಲಿಂದ ಅರ್ಧ ಕಿ.ಮೀ ದೂರದಲ್ಲಿ ಒಂದು ಬೆಟ್ಟ!!

Exploration is curiosity put into action saakshah tv

ಅದನ್ನು ನಮ್ಮ ಕಡೆ ಮುಳಿಪಡುಪು ಎನ್ನುತ್ತಾರೆ.. ಸ್ಕೂಲ್‌ ಟೈಮಲ್ಲಿ ನಾವು ಓದುತ್ತಿದ್ದ ಮಕ್ಕಳ ಕಾದಂಬರಿಯಲ್ಲಿ ಬರುತ್ತಿದ್ದ ನಿಗೂಢ, ಅದ್ಭುತ, ಸುಂದರ ಲೋಕವನ್ನೇ ಹೋಲುವ ಸ್ಥಳವದು! ಬೆಟ್ಟದ ತುಂಬಾ ಬಂಗಾರದ ಬಣ್ಣದ ಮುಳಿಹುಲ್ಲು, ಅದರೊಳಗೆ ಅಡಗಿಕೊಂಡರೆ ಒಬ್ಬರಿಗೆ ಇನ್ನೊಬ್ಬರು ಕಾಣಿಸುವುದು ಅಸಾಧ್ಯ.. ತಗ್ಗಿನಲ್ಲಿರುವ ಗದ್ದೆಯಿಂದ ಎತ್ತರಕ್ಕಿರುವ ಆ ಮುಳಿಪಡ್ಪುಗೆ ಹೋಗಬೇಕಾದರೆ, ಒಂದು ಸಣ್ಣ ಮರದ ಸೇತುವೆ ದಾಟಬೇಕು!!

ನಾವು ನಾಲ್ಕೈದ್‌ ಜನ ಕಸಿನ್ಸ್‌ ಪ್ರತಿ ದಿನ ಸಾಯಂಕಾಲದ ಹೊತ್ತು ಆ ಮುಳಿಪಡ್ಪಿನ ಕೆಳಗಿರುವ ಗದ್ದೆಯವರೆಗೆ ಹೋಗುವುದು, ಅಲ್ಲಿಗೆ ಹೋದರೆ ಮನೆಯಲ್ಲಿ ಬೈಸಿಕೊಳ್ಳಬೇಕೇನೋ ಅನ್ನೋ ಭಯದಲ್ಲಿ ತಿರುಗಿ ಬರುವುದು, ನಾಲ್ಕೈದು ದಿನ ಹಾಗೇ ಕಳೆಯಿತು. ಮತ್ತೊಂದು ದಿನ ನಮ್ಮಲ್ಲಿ ಅಲ್ಲಿಗೆ ಹೋಗಲೇಬೇಕೆನ್ನುವ ಆಸೆ ಎಷ್ಟು ದಟ್ಟವಾಯಿತೆಂದರೆ, ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡು, ಸೈಲೆಂಟಾಗಿ, ಆ ಮರದ ಸೇತುವೆ ದಾಟಿ, ಮುಳಿ ಪಡ್ಪಿಗೆ ಹೋಗಿಯೇ ಬಿಟ್ಟೆವು.. ಆಗಿನ್ನು ಪಡುವಣ ದಿಕ್ಕಿನಲ್ಲಿ ಸೂರ್ಯ ಕೆಳಗಿಳಿಯಲು ಸಿದ್ದನಾಗುತ್ತಿದ್ದ.. ಬೆಟ್ಟವೆಲ್ಲಾ ಹಳದಿ ಹಳದಿ, ಮುಳಿ ಹುಲ್ಲು ಬಂಗಾರದ ಹಾಗೇ ಮಿರಿ ಮಿರಿ ಮಿಂಚುತ್ತಿತ್ತು.. ನಮಗಂತೂ ಸ್ವರ್ಗಕ್ಕೆ ತಲುಪಿದ್ದೀವೇನೋ ಅನ್ನೋ ಅಷ್ಟು ಖುಷಿ.. ಕತ್ತಲು ಆವರಿಸುವರೆಗೆ ಆಟವೋ ಆಟ.. ಕತ್ತಲಾದ ಮೇಲೆ, ಆ ಮರದ ಸೇತುವೆ ದಾಟಿ, ಕೆಳಗಿಳಿದು ಬಂದಾಗ ಎಲ್ಲರ ಮನಸ್ಸು ಹಗುರ ಹಗುರ.. ಅಷ್ಟೊಂದು ದಿನಗಳ ಕುತೂಹಲ, ನಿರೀಕ್ಷೆ ಎಲ್ಲಾ ಪೂರ್ಣಗೊಂಡ ಸಂತೃಪ್ತಿ..

Exploration is curiosity put into action saakshah tv

ಇಂಥ ಕುತೂಹಲದಿಂದಾಗಿಯೇನೋ, ಮನೆಯ ಸುತ್ತಮುತ್ತ ನನ್ನ ಭೇಟಿಗೆ ನಿಲುಕದ ಜಾಗಗಳೇ ಕಡಿಮೆ.. ಇವತ್ತು ಇಂತದ್ದೇ ಒಂದು ಅನ್ವೇಷಣೆಗೆ ಹೋಗಿದ್ದೇ, ನನ್ನೊಳಗೆ ಉತ್ಸಾಹ ಪುಟಿದೇಳುವಂತೆ ಮಾಡುತ್ತಿದ್ದ, ಮತ್ತದೇ ಹಳೆಯ ನೆನಪುಗಳನ್ನು, ಹೊರತೆಗೆಯುವಂತೆ ಮಾಡಿದ್ದು.. ಇತ್ತೀಚೆಗೆ ಊರಿಗೆ ಬಂದ ಮೇಲೂ ನನ್ನ ಈ ಆಸಕ್ತಿ ಹೆಚ್ಚಾಗಿತ್ತೇ ಹೊರತು ಕಡಿಮೆ ಆಗಿರಲಿಲ್ಲ.. ಇವತ್ತು ಬೆಳಗ್ಗಿನ ಜಾವ, ನಾನು ಯಾವತ್ತೂ ನೋಡಿರದ, ತಾವು ಹುಟ್ಟಿ ಬೆಳೆದ ಊರಾಗಿದ್ದರೂ, ನನ್ನ ಪತಿ ಬಾಲ್ಯದಲ್ಲಿ ಯಾವತ್ತೋ ಒಮ್ಮೆ ಭೇಟಿ ನೀಡಿದ ಜಾಗಕ್ಕೆ ನಾನೇ ಒತ್ತಾಯದಿಂದ ಅವರನ್ನು ಹೊರಡಿಸಿದ್ದೆ.. ಮನೆಯಿಂದ ಅರ್ಧ, ಮುಕ್ಕಾಲು ಕಿ.ಮೀ ದೂರವಷ್ಟೇ. ಅಲ್ಲಿನ ವಾತಾವರಣ, ಆಂಬಿಯನ್ಸ್‌ ಅವರಿಗೆ ಖುಷಿ ಕೊಟ್ಟು ಆ ಭೇಟಿ ಸಾರ್ಥಕ ಆಗುವಂತೆ ಮಾಡಿತ್ತು.. ಯಾವತ್ತೋ ಒಂದು ದಿನ ಭೇಟಿಕೊಟ್ಟ ಜಾಗ, ನನ್ನ ಕನಸಲ್ಲಿ ಆಗಾಗ ಬರುತ್ತಿತ್ತು ಅಂತ ಅವರಂದಾಗ, exploration ಅನ್ನುವುದು ಒಳಮನಸ್ಸಿನ ಪ್ರೇರಣೆ, ಆಗಿರಬಹುದೇನೋ ಎಂದು ಆ ಕ್ಷಣದಲ್ಲಿ ನನಗೆ ಅನ್ನಿಸಿದ್ದು ನಿಜ. ಒಟ್ಟಿನಲ್ಲಿ ಅದೊಂದು ಅನೂಹ್ಯ, ಅದ್ಭುತ ಅನುಭೂತಿ.!! Exploration is curiosity put into action

  • ಭವ್ಯ ಬೊಳ್ಳೂರು

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd