ಕೋಲಾರ : ಕೋಲಾರ ಜಿಲ್ಲೆಯಯಾದ್ಯಂತ ತಮ್ಮದೇ ಶೈಲಿಯಲ್ಲಿ ಉತ್ತಮ ಕೆಲಸಗಳನ್ನು ಕೈಗೊಂಡು, ಸಾವಿರಾರು ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿ ಜಿಲ್ಲೆಯ ಜನರ ಮನವನ್ನು ಗೆದ್ದಿದ್ದ ಅಂದಿನ ಕೋಲಾರ ಸಿಇಓ ಜಗದೀಶ್ ಅವರಿಗೆ ಕೋಲಾರದಿಂದ ನಿರ್ಗಮಿಸುವಾಗ ಗ್ರಾಮ ಪಂಚಾಯಿತಿ ಪಿಡಿಓಗಳು ಬೆಳ್ಳಿಗದೆ, ಕಿರೀಟ ನೀಡಿ ಸನ್ಮಾನ ಮಾಡಿದ್ದರು. ಇದು ಕಾನೂನು ಉಲ್ಲಂಘನೆ ಆಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಉಡುಪಿ ಡಿಸಿ ಜಗದೀಶ್ ಹಾಗೂ ತಾಪಂ ಇಒ ಮತ್ತು 9 ಮಂದಿ ಗ್ರಾಪಂ ಪಿಡಿಒಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ಕೋಲಾರ ಜಿ.ಪಂ ಸಭಾಂಗಣದಲ್ಲಿ ಆಗಸ್ಟ್ 23, 2019 ರಂದು ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988ರ ಅನ್ವಯ ತನಿಖೆ ನಡೆಸಿ ವರದಿ ನೀಡುವಂತೆ ಕೋಲಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶ ನೀಡಿದೆ. ಘಟನೆ ಸಂಬಂಧಪಟ್ಟಂತೆ ಕೋಲಾರದ ಎಸ್.ನಾರಾಯಣಸ್ವಾಮಿ ಭ್ರಷ್ಟಾಚಾರ ನಿಗ್ರಹದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು.
ಅಕ್ರಮ ಸಂಭಾವನೆ ರೂಪದಲ್ಲಿ ನಿರ್ಗಮಿತ ಅಧಿಕಾರಿಗೆ ಬೀಳ್ಕೊಡುಗೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. 17 ಜೂನ್ 2020 ರಂದು ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ತನಿಖೆ ನಡೆಸಿ 25 ಆಗಸ್ಟ್ 2020 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ 25 ಜೂನ್ 2020 ರಂದು ನಿರ್ಗಮಿತ ಜಿಪಂ ಸಿಇಒ ಜಗದೀಶ್, ಪಿಡಿಒಗಳಾದ ಕೆ.ಮಹೇಶ್ ಕುಮಾರ್, ಪಿ.ನಾರಾಯಣಪ್ಪ, ಎಂ.ರಾಮಕೃಷ್ಣ, ವಿ.ಶಂಕರ್, ಎನ್.ಸಂಪರಾಜ್, ಎಸ್.ಜಿ.ಹರೀಶ್ ಕುಮಾರ್, ಎಂ.ಸೋಮಶೇಖರ್, ಅಶ್ವತ್ಥ ನಾರಾಯಣ, ಎಂ.ಸುರೇಶ್ಕುಮಾರ್ ಹಾಗೂ ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್ ವಿರುದ್ಧ ಎಸಿಬಿಯು ಐಪಿಸಿ ಕಲಂ 465, 467, 468, 471ರ ಅನ್ವಯ ಎಫ್ಐಆರ್ ದಾಖಲಿಸಿಕೊಂಡು ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಮತ್ತು ಪೊಲೀಸ್ ನಿರೀಕ್ಷಕ ಜಿ.ಎನ್.ವೆಂಕಟಾಚಲಪತಿ ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆಯೂ ಕೆಲವರು ಈ ಕುರಿತು ಆರೋಪ ಮಾಡಿದ್ದಾಗ ಪಿಡಿಒ ಸಂಘದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ನಿರ್ಗಮಿತ ಸಿಇಒಗೆ ಬಾಡಿಗೆ ಬೆಳ್ಳಿ ಗದೆ, ಕಿರೀಟ ತಂದು ಸನ್ಮಾನ ಮಾಡಿದ್ದಾಗಿ ವಿವರಣೆ ನೀಡಿದ್ದರು. ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿರುವುದು ಕುತೂಹಲ ಕೆರಳಿಸಿದೆ.