FAF | ಸೋಲಿಗೆ ಹೆದರಲ್ಲ.. ಮುನ್ನುಗ್ಗುತ್ತೇವೆ
ಇಂಡಿಯಲ್ ಪ್ರಿಮಿಯರ್ ಲೀಗ್ ನ 15ನೇ ಸೀಸನ್ ನ 36 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯಂತ ಹೀನಾಯವಾಗಿ ಸೋಲು ಕಂಡಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳಿಗೆ ಉತ್ತರಿಸಲಾಗದೇ ಬೆಂಗಳೂರು ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಆರ್ ಸಿಬಿಯ ಈ ಸೋಲಿನ ಬಗ್ಗೆ ತಂಡದ ನಾಯಕ ಫಾಫ್ ಡುಪ್ಲಸಿಸ್ ತೀವ್ರ ಬೇಸರ ಹೊರಹಾಕಿದ್ದಾರೆ.
ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು.
ಪಂದ್ಯದ ಎರಡನೇ ಓವರ್ ನಲ್ಲಿ 5 ರನ್ ಗಳಿಸಿದ್ದ ಫಾಫ್ ಡುಪ್ಲಸಿಸ್ ಜಾನ್ಸನ್ ಗೆ ವಿಕೆಟ್ ಒಪ್ಪಿಸಿದರು.
ನಂತರದ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆದರು. ಇದೇ ಓವರ್ ನ ಕೊನೆಯ ಎಸೆತದಲ್ಲಿಯೇ ಅನೂಜ್ ರಾವತ್ ಪೆವಿಲಿಯನ್ ಸೇರಿಕೊಂಡರು.
ಇಲ್ಲಿಗೆ ಕೇವಲ 8 ರನ್ ಗಳಿಗೆ ಆರ್ ಸಿಬಿ ತಂಡ ಟಾಪ್ ಆರ್ಡರ್ ಬ್ಯಾಟರ್ ಗಳನ್ನು ಕಳೆದುಕೊಳ್ತು..
ಇನ್ನು ಇನ್ನಿಂಗ್ಸ್ ನ ಐದನೇ ಓವರ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ 12 ರನ್ ಗಳಿಸಿ ಟಿ ನಟರಾಜನ್ ಗೆ ವಿಕೆಟ್ ನೀಡಿದರು.
ಇದಾದ ನಂತರ ಸುಯಾಶ್ ಪ್ರಭುದೇಸಾಯಿ 15 ರನ್ ಗಳಿಸಿ ಸುಚಿತ್ ಗೆ ವಿಕೆಟ್ ಕೊಟ್ಟರು.
8 ನೇ ಓವರ್ ನ ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಔಟ್ ಆದ್ರೆ 9 ನೇ ಓವರ್ ನ 2 ನೇ ಎಸೆತದಲ್ಲಿ ಶಹಬ್ಬಾಸ್ ಅಹ್ಮದ್ ಔಟ್ ಆದ್ರು.
ಟೂರ್ನಿಯಲ್ಲಿ ಇದೇ ಮೊದಲ ಬಾರಿ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು. ಶಹಬ್ಬಾಸ್ ಅಹ್ಮದ್ 7 ರನ್ ಗಳಿಸಿದರು.
ಇಲ್ಲಿಗೆ 49 ರನ್ ಗಳಿಸುವಷ್ಟರಲ್ಲಿ ಆರ್ ಸಿಬಿ ತಂಡದ ನಂಬಿಕಸ್ತ ಬ್ಯಾಟರ್ ಗಳು ಎಲ್ಲರೂ ಪೆವಿಲಿಯನ್ ಸೇರಿಕೊಂಡರು.ಕೊನೆಯಲ್ಲಿ ಹರ್ಷಲ್ ಪಟೇಲ್ ನಾಲ್ಕು ರನ್, ವನಿಂದು ಹಸರಂ 8 ರನ್ ಹೆಜಲ್ ವುಡ್ ಮೂರು ರನ್, ಸಿರಾಜ್ 2 ರನ್ ಗಳಿಸಿದರು.
ಈ ಪ್ರದರ್ಶನದಿಂದ ಆಘಾತಕ್ಕೆ ಒಳಗಾಗಿದ್ದ ಆರ್ ಸಿಬಿ ಬೌಲರ್ ಗಳು ಕೂಡ ಹೈದರಾಬಾದ್ ತಂಡಕ್ಕೆ ಸುಲಭವಾಗಿ ಶರಣಾದ್ರು.
ಕೇವಲ 8 ಓವರ್ ಗಳಲ್ಲಿ ಸನ್ ರೈಸರ್ಸ್ ಗುರಿ ಮುಟ್ಟಿ ಪಂದ್ಯ ಗೆದ್ದುಕೊಳ್ತು.
ಇನ್ನು ಪಂದ್ಯದ ಬಳಿಕ ಮಾತನಾಡಿ ಆರ್ ಸಿಬಿ ತಂಡದ ನಾಯಕ ಫಾಫ್ ಡುಪ್ಲಸಿಸ್, ಮೊದಲ ನಾಲ್ಕು ಓವರ್ ಗಳಲ್ಲಿ ನಾವು ವಿಕೆಟ್ ಕಳೆದುಕೊಳ್ಳಬಾರದಿತ್ತು.
ಮುಂಬರುವ ಪಂದ್ಯಗಳಲ್ಲಿ ನಾವು ಮತ್ತಷ್ಟು ಉತ್ತಮಗೊಳ್ಳಬೇಕಿದೆ. ಮುಖ್ಯವಾಗಿ ಪವರ್ ಪ್ಲೇ ನಲ್ಲಿ ಉತ್ತಮ ಅಡಿಪಾಯ ಹಾಕಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನು ಪಿಚ್ ಉತ್ತಮವಾಗಿತ್ತು. ಪಿಚ್ ನಲ್ಲಿ ಯಾವುದೇ ದೋಷ ಇರಲಿಲ್ಲ. ಜಾನ್ಸೆನ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಈ ಸೋಲಿನಿಂದ ಕಂಗೆಡುವ ಅಗತ್ಯವಿಲ್ಲ.
ಇದೊಂದು ಕೆಟ್ಟ ದಿನವಷ್ಟೆ. ಆದ್ರೆ ಈ ಪಂದ್ಯದಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ.
ಒಂದು ತಂಡವಾಗಿ ನಾವು ಮುನ್ನಡೆಯುತ್ತೇವೆ. ಇದು ದೊಡ್ಡ ಟೂರ್ನಿಯಾಗಿದೆ ಎಂದು ಫಾಫ್ ಡುಪ್ಲಸಿಸ್ ಹೇಳಿದ್ದಾರೆ. Faf Du Plessis Comments on RCB Defeat on SRH