ರೈತರ ಶವವನ್ನು ಮುಂದಿಟ್ಟುಕೊಂಡು ನಕಲಿ ಗಾಂಧಿ ಕುಟುಂಬ ರಾಜಕಾರಣ : ಬಿಜೆಪಿ BJP saaksha tv
ಬೆಂಗಳೂರು : ರೈತರ ಶವವನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿರುವ ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಅನ್ನದಾತರ ನೋವಿನ ಬಗ್ಗೆ ನೈಜ ಕಾಳಜಿಯಿದೆಯೇ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ಇದಕ್ಕೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದೆ. ರೈತರ ಶವವನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿರುವ ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಅನ್ನದಾತರ ನೋವಿನ ಬಗ್ಗೆ ನೈಜ ಕಾಳಜಿಯಿದೆಯೇ.? ಇದ್ದಿದ್ದರೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾದಾಗ ಪ್ರಿಯಾಂಕ ಹಾಗೂ ರಾಹುಲ್ ಗಾಂಧಿ ಏಕೆ ಸಾಂತ್ವನ ಹೇಳಲಿಲ್ಲ? ಆಗವರು ಇಟಲಿಯ ಪ್ರವಾಸದಲ್ಲಿದ್ದರೇ?
ನಕಲಿ ಪ್ರಜಾಪ್ರಭುತ್ವವಾದಿ ಸಿದ್ದರಾಮಯ್ಯ ಅವರಿಗೆ ಚುನಾಯಿತ ಸರ್ಕಾರವನ್ನು ಬುಡಮೇಲುಗೊಳಿಸಿ ಎಂದು ಆಗ್ರಹಿಸುವುದರಿಂದ ವಿಕೃತ ಆನಂದ ಲಭಿಸುತ್ತದೆಯೇ? ಚುನಾಯಿತ ಸರ್ಕಾರವನ್ನು ವಜಾಗೊಳಿಸುವ ವಿಚಾರದಲ್ಲಿ ಪಿಎಚ್‌ಡಿ ಪಡೆದ ನಕಲಿ ಗಾಂಧಿ ಕುಟುಂಬದ ಸೇವಕರಿಂದ ಇನ್ನೇನು ನಿರಿಕ್ಷೆ ಮಾಡಲು ಸಾಧ್ಯ?
ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಾಗ ರೈತರ ಮೈ ನೀಲಿಗಟ್ಟುವಂತೆ ಹೊಡೆಸಿದ್ದು ರಾವಣನೋ, ಕೀಚಕನೋ? ರೈತ ಮಹಿಳೆಯರಿಗೆ ಬಡಿದು ಕಣ್ಣೀರು ಹರಿಸಿದ್ದು ದುರ್ಯೋಧನನೋ, ದುಶ್ಯಾಸನನೋ? ನಿಮ್ಮ ಬಳಿ ಉತ್ತರವಿದೆಯೇ ಡಿಕೆಶಿ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.









