ಹುಬ್ಬಳ್ಳಿ: ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಅತ್ತಿಗೆಯನ್ನೇ ಮೈದುನ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ನಗರದ ಕೃಷ್ಣನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಸಾಜೀದಾ ನಾಲಬಂದ (38) ಕೊಲೆಯಾದ ಮಹಿಳೆ. ಅಲ್ಲದೇ, ಘಟನೆಯಲ್ಲಿ ಮಹಿಳೆಯ ಪತಿ ಮಹ್ಮದ್ ಹನೀಫ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಸೀರ್ ನಾಲಬಂದ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ.
ನಾಸೀರ್ ಮನೆಯಲ್ಲಿ ಅಣ್ಣ, ಅತ್ತಿಗೆ ಮೂವರು ವಾಸವಾಗಿದ್ದರು. ಇವರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗೆ ಭಾನುವಾರವೂ ಯಾವುದೋ ವಿಚಾರಕ್ಕೆ ಆರಂಭವಾದ ಜಗಳ, ವಿಕೋಪಕ್ಕೆ ತೆರಳಿದೆ. ಆಗ ಮೈದುನ ಚಾಕುವಿನಿಂದ ಅತ್ತಿಗೆಯ ಕುತ್ತಿಗೆಗೆ ಇರಿದಿದ್ದಾನೆ. ಕೂಡಲೇ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.