ಬೆಂಗಳೂರು: ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ರೌಡಿಯ ಹತ್ಯೆ ಮಾಡಿ ಮೃತದೇಹವನ್ನು ತಮಿಳುನಾಡಿನಲ್ಲಿ ಸುಟ್ಟುಹಾಕಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರೌಡಿ ಗುಣ ಎಂಬಾತನನ್ನು ಜ. 12ರಂದು ಭಾರತಿನಗರ ರೌಡಿಶೀಟರ್ ಬ್ರಿಜೇಶ್ ಮಾತನಾಡಬೇಕು ಎಂದು ತನ್ನ ಬಾಗಲೂರು ಬಳಿಯ ಅಪಾರ್ಟ್‌ಮೆಂಟ್‌ಗೆ ಕರೆಯಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿ ಬ್ರಿಜೇಶ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಗುಣ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಪೊಲೀಸರ ಕೈಗೆ ಸಿಕ್ಕಿ ಬೀಳಬಾರದೆಂದು ಆರೋಪಿ, ಮೃತದೇಹವನ್ನು ತಮಿಳುನಾಡಿನ ನಿರ್ಜನ ಪ್ರದೇಶಕ್ಕೆ ಸಾಗಿಸಿ, ಅಲ್ಲಿ ಸುಟ್ಟು ಹಾಕಿದ್ದಾನೆ.
ರೌಡಿಶೀಟರ್ ಬ್ರಿಜೇಶ್ ನಕಲಿ ಚಿನ್ನ ತಂದು ಮಾರಲು ಗುಣನಿಗೆ ನೀಡಿದ್ದ. ಗುಣ ಚಿನ್ನವನ್ನು ಮುತ್ತೂಟ್ ಫೈನಾನ್ಸ್ ನಲ್ಲಿ 6 ಲಕ್ಷಕ್ಕೆ ಅಡವಿಟ್ಟಿದ್ದ. ನಂತರ ಬಂದ ಹಣದಲ್ಲಿ ಇಬ್ಬರು ಹಂಚಿಕೊಂಡಿದ್ದರು. ಆನಂತರ ಮುತ್ತೂಟ್ ಫೈನಾನ್ಸ್ ಗೆ ನಕಲಿ ಚಿನ್ನ ಎಂಬುವುದು ಗೊತ್ತಾದಾಗ ಗುಣನಿಗೆ ಫೋನ್ ಮಾಡಿ ಹಣ ಕೇಳಿದ್ದಾರೆ. ಹಣ ನೀಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಆಗ ಗುಣ, ಬ್ರಿಜೇಶ್‌ಗೆ ಹಣ ಮರಳಿ ನೀಡುವಂತೆ ಒತ್ತಾಯಿಸಿದ್ದಾನೆ. ಇದರಿಂದ ಕೋಪಗೊಂಡಿದ್ದ ಬ್ರಿಜೇಶ್, ಅಪಾರ್ಟ್ಮೆಂಟ್‌ಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.








