ಶಿವಮೊಗ್ಗ : ಮತಾಂಧ ಮುಸಲ್ಮಾನರೇ ಕಾಂಗ್ರೆಸ್ ಪಕ್ಷದ ಆಸ್ತಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ, ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬೆಂಗಳೂರಿನ ಗಲಭೆ ಯಾರು ಮಾಡಿದ್ದಾರೆಂದು ಸಿದ್ದರಾಮಯ್ಯಗೆ ಸಹ ತಿಳಿದಿದೆ. ಅದರೆ ಮುಸ್ಲಿಂ ಮತಾಂಧರು ಎಂದು ನೇರವಾಗಿ ಹೇಳಲು ಅವರಿಗೆ ಧಮ್ ಇಲ್ಲ. ಮತಾಂಧ ಮುಸಲ್ಮಾನರೇ ಕಾಂಗ್ರೆಸ್ ಪಕ್ಷದ ಆಸ್ತಿ. ಹಿಂದೂ ಸಂಘಟನೆ ಅಥವಾ ಕಾರ್ಯಕರ್ತರು ಈ ರೀತಿ ಮಾಡಿದ್ದರೆ ನೀವು ಸುಮ್ಮನೆ ಇರುತ್ತಿದ್ದರೇ? ಸಿದ್ದರಾಮಯ್ಯನವರೇ ರಾಜಕಾರಣದಲ್ಲಿ ನೀವು ಯಾರಿಗೆ ಮಾರಿಕೊಂಡಿದ್ದಿರಾ? ರಾಜಕಾರಣ ಎಂದು ಈ ರೀತಿಯಲ್ಲಿ ಮಾಡುವುದು ನ್ಯಾಯವೇ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಬೆಂಕಿಕಾರಿದ ಈಶ್ವರಪ್ಪ, ಕಾಂಗ್ರೆಸ್ಸಿಗರು ಕುರ್ಚಿಗೋಸ್ಕರ ಪ್ರಾಣ ಬಿಡುತ್ತಾರೆ. ಅದಕ್ಕೆ ಮತಾಂಧರಿಗೆ ಬೆಂಬಲ ನೀಡ್ತಾರೆ. ಈ ಎಲ್ಲ ಆಟವನ್ನು ಕಾಂಗ್ರೆಸ್ ರಾಷ್ಟ್ರ ನಾಯಕರು ಹಲವು ವರ್ಷದಿಂದ ಮಾಡಿದ್ದಾರೆ. ಮತಾಂಧರಿಗೆ ಬೆಂಬಲ, ಮಠ ಮಾನ್ಯಗಳಿಗೆ ಅನ್ಯಾಯ ಮಾಡಿದ್ದಕ್ಕೆ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ. ದೇಶದಲ್ಲಿ ಭೂತಗನ್ನಡಿ ಹಾಕಿ ಕಾಂಗ್ರೆಸ್ ಅನ್ನು ಹುಡುಕುವಂತಾಗಿದ್ದು. ರಾಜ್ಯದಲ್ಲಿಯೂ ಕುಂಟುತ್ತಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.








