ಬೆಂಗಳೂರು ; ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಎಣ್ಣೆ ಪ್ರಿಯರು ಮದ್ಯದಂಗಡಿ ಬಳಿ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಅಬಕಾರಿ ಸಚಿವ ಹೆಚ್ ನಾಗೇಶ್ ಅವರು ಪ್ರತಿಕ್ರಿಯೆ ನೀಡಿದ್ದು, “ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಮದ್ಯ ಮಾರಾಟವಾಗುತ್ತಿದ್ದು, ವೈನ್ ಸ್ಟೋರ್ ಗಳಿಗೆ ಅಗತ್ಯ ಮದ್ಯ ಸರಬರಾಜು ಆಗಲಿದೆ. ವ್ಯವಸ್ಥೆ ಹಾಳು ಮಾಡುವ ರೀತಿಯಲ್ಲಿ ಯಾರು ವರ್ತಿಸಬಾರದು. ರಾಜ್ಯದ ಕೆಲವೆಡೆ ಗೊಂದಲವಾದ ಬಗ್ಗೆ ಮಾಹಿತಿ ಬಂದಿದೆ. ಗೊಂದಲವಾದರೆ, ನೂಕು ನುಗ್ಗಲು ಆದರೆ ಈಗ ನಾವು ಮಾಡಿರುವ ವ್ಯವಸ್ಥೆ ಕ್ಲೋಸ್ ಆಗಲಿದೆ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.
ಇನ್ನು ಹೊಸದಾಗಿ ಸರಬರಾಜು ಮಾಡಲು ಗೋದಾಮ್ ಗಳಿಗೆ ಸೂಚನೆ ಕೊಡಲಾಗಿದೆ. ಇಂದು ಸಂಜೆಯಿಂದಲೇ ಮದ್ಯದ ಅಂಗಡಿಗಳಿಗೆ ಮದ್ಯ ಸರಬರಾಜು ಆಗಲಿದೆ. ಈಗಿರುವ ಮದ್ಯ ಇವತ್ತೇ ಖಾಲಿ ಆಗಲಿದೆ. ದೊಡ್ಡ ಮಟ್ಟದ ಆದಾಯ ನಿರೀಕ್ಷೆ ಮಾಡಿಲ್ಲ. ಲಾಕ್ ಡೌನ್ ನಲ್ಲಿ ನಮಗೆ ನಷ್ಟ ಸಹ ಆಗಿದೆ. ಬಾರ್ ಗಳು, ಕ್ಲಬ್ ಗಳು ಓಪನ್ ಆದರೆ ನಮಗೆ ಲಾಭ ಆಗಲಿದೆ. ಈಗ ಶೇಕಡಾ 40 ರಷ್ಟು ಮಾತ್ರ ಮದ್ಯ ಸರಬರಾಜು ಆದಂಗೆ ಆಗಿದೆ. ಬಾರ್ ಗಳನ್ನು ಓಪನ್ ಮಾಡೋ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ತಿಳಿಸಿದರು.
ಬಾರ್ ತೆರೆಯುವ ಬಗ್ಗೆ ಸಚಿವ ಸಂಪುಟದಲ್ಲೇ ಇದಕ್ಕೆ ತೀರ್ಮಾನ ಆಗಬೇಕು. ಪ್ರಧಾನಿ ಕರೆಯನ್ನು ನಾವು ಗೌರವಿಸುತ್ತೇವೆ, ಸಿಎಂ ಸೂಚನೆಗಳನ್ನು ನಾವು ಪಾಲಿಸುತ್ತೇವೆ. ಸದ್ಯ ಹಬ್ಬದ ವಾತಾವರಣ ಸೃಷ್ಟಿ ಆಗಿದೆ. ಹೊಸದಾಗಿ ಸರಬರಾಜು ಮಾಡುವ ಮದ್ಯಕ್ಕೆ ಹೊಸ ದರವಿರುತ್ತದೆ ಎಂದು ತಿಳಿಸಿದರು.