ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..? ಫಿಫಾ ಚಾಂಪಿಯನ್‍ಶಿಪ್ ರಿಂಗ್‍ನ ವಿಶೇಷತೆಗಳೇನು..?
ಈ ಉಂಗುರ ಬರೀ ಕೋಟಿ ಬೆಲೆ ಬಾಳುವ ಒಡವೆಯಲ್ಲ. ಬದಲಾಗಿ 2026ರ ಫಿಫಾ ವಿಶ್ವಕಪ್ ಟೂರ್ನಿಯ ವಿಜಯದ ರಾಜಮುದ್ರೆ..!
ರಾಜಪ್ರಭುತ್ವದಲ್ಲಿ ರಾಜ ಮಹಾರಾಜರು ಯುದ್ಧದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದಾಗ ವೀರ ಸೇನಾನಿಗಳನ್ನು ಗುರುತಿಸಿ ಗೌರವಿಸುತ್ತಿದ್ದರು. ಜೊತೆಗೆ ಗೆಲುವಿನ ಉಡುಗೊರೆಯಾಗಿ ರಾಜಮುದ್ರೆಯ ಉಂಗುರ ಸೇರಿದಂತೆ ಬೆಲೆಬಾಳುವ ಒಡವೆಗಳನ್ನು ನೀಡುತ್ತಿದ್ದರು.
ಇದೀಗ ಫಿಫಾ ಸಂಘಟನೆಯು, ಇತಿಹಾಸದ ರಾಜ ಮಹಾರಾಜರ ಪರಂಪರೆಯನ್ನು ಜಾಗತಿಕ ಫುಟ್‍ಬಾಲ್ ಅಖಾಡದಲ್ಲಿ ಪರಿಚಯಿಸುತ್ತಿದೆ. ಇದಕ್ಕೆ 2026ರ ಫಿಫಾ ವಿಶ್ವಕಪ್ ಟೂರ್ನಿ ಸಾಕ್ಷಿಯಾಗಲಿದೆ.
ಅಂದ ಹಾಗೇ, 96 ವರ್ಷಗಳ ಫಿಫಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಜೇತ ತಂಡದ ಆಟಗಾರರಿಗೆ, ರಾಜಮುದ್ರೆಯಂತಹ ಚಾಂಪಿಯನ್‍ಶಿಪ್ ಉಂಗುರಗಳನ್ನು ಫಿಫಾ ತೊಡಿಸಲಿದೆ. ವಿಜೇತ ತಂಡದ ಕಿರೀಟಕ್ಕೆ ಫಿಫಾ ಟ್ರೋಫಿ ಬರೀ ಮಿನುಗುವ ಗರಿ ಮಾತ್ರವಲ್ಲ. ವಿಜೇತ ಆಟಗಾರರ ಕೈ ಬೆರಳಿನ ಅಂದವನ್ನು ಫಿಫಾÀ ಲಾಂಛನದ ಉಂಗುರಗಳು ಇನ್ನಷ್ಟು ಮೆರಗುಗೊಳಿಸಲಿವೆ. .
ಫಿಫಾ ಅಖಾಡದಲ್ಲಿ ಅಮೆರಿಕಾ ಕ್ರೀಡಾ ಸಂಪ್ರದಾಯದ ಪರಿಚಯ
ಹೌದು, ಅಮೆರಿಕಾದ ಕ್ರೀಡೆಗಳಲ್ಲಿ ವಿಜೇತ ತಂಡದ ಆಟಗಾರರಿಗೆ ಉಂಗುರಗಳನ್ನು ಕೊಡುವ ಸಂಪ್ರದಾಯವಿದೆ. 1922ರಲ್ಲಿ ನ್ಯೂಯಾರ್ಕ್‍ನ ಜೈಂಟ್ಸ್ ತಂಡ ವಲ್ರ್ಡ್ ಸಿರೀಸ್ ಗೆದ್ದಾಗ ಈ ಪರಂಪರೆಗೆ ಮುನ್ನುಡಿ ಬರೆಯಲಾಗಿತ್ತು.
ಇನ್ನು ಅಮೆರಿಕಾದ ಪ್ರತಿಷ್ಠಿತ ಎನ್ ಎಫ್ ಎಲ್ ಸೂಪರ್ ಬೌಲ್ ಟೂರ್ನಿಯಲ್ಲೂ ಗೆದ್ದ ಆಟಗಾರರಿಗೆ ಉಂಗುರಗಳನ್ನು ನೀಡಲಾಗುತ್ತದೆ. ಈ ಟೂರ್ನಿಯಲ್ಲಿ ಗೆಲ್ಲುವ ಟ್ರೋಫಿಯಷ್ಟೇ, ಆಟಗಾರರಿಗೆ ನೀಡುವ ಉಂಗುರವೂ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಹಾಗಾಗಿ ಈ ಬಾರಿ ಮೆಕ್ಸಿಕೊ, ಕೆನಡಾ ಜೊತೆ ಫಿಫಾ ಆತಿಥ್ಯವನ್ನು ವಹಿಸಿರುವ ಅಮೆರಿಕಾ, ತನ್ನ ದೇಶದ ಕ್ರೀಡಾ ಸಂಪ್ರದಾಯದ ಗತ್ತನ್ನು ಜಾಗತಿಕ ಫುಟ್‍ಬಾಲ್ ಅಂಗಣಕ್ಕೂ ವಿಸ್ತರಿಸಿದೆ.
ಫಿಫಾ ಚಾಂಪಿಯನ್‍ಶಿಪ್ ರಿಂಗ್Àಗಳ ವಿಶೇಷತೆಗಳೇನು..?
ಉಂಗುರದ ಒಂದು ಬದಿಯಲ್ಲಿ ಫಿಫಾ ಟ್ರೋಫಿ ಹಾಗೂ ಇನ್ನೊಂದು ಬದಿಯಲ್ಲಿ ವಿಜೇತ ತಂಡದ ಲೋಗೋ ಇರಲಿದೆ. ಆಟಗಾರರ ಕೈ ಬೆರಳಿನ ಅಳತೆಗೆ ತಕ್ಕಂತೆ ಈ ಬೆಲೆಬಾಳುವ ಉಂಗುರಗಳನ್ನು ಸಿದ್ದಪಡಿಸಲಾಗುವುದು. ಹಾಗಾಗಿ ಟ್ರೋಫಿ ವಿತರಣೆಯ ವೇಳೆ ಸಾಂಕೇತಿಕವಾಗಿ ನಾಯಕ ಮತ್ತು ಹೆಡ್ ಕೋಚ್‍ಗೆ ಮಾತ್ರ ಈ ಉಂಗುರಗಳನ್ನು ನೀಡಲಾಗುತ್ತದೆ.
ಫಿಫಾ ಚಾಂಪಿಯನ್‍ಶಿಪ್ ಉಂಗುರದ ಬೆಲೆ ಎಷ್ಟು..?
ಈ ಉಂಗುರವನ್ನು 18 ಕ್ಯಾರೆಟ್ ಚಿನ್ನ ಹಾಗೂ ವಜ್ರ, ಕೆಂಪು ಮಾಣಿಕ್ಯ ಹಾಗೂ ನೀಲಮಣಿ ರತ್ನಗಳಿಂದ ವಿನ್ಯಾಸಗೊಳಿಸಲಾಗಿದೆ. ಒಂದು ಉಂಗುರದ ಬೆಲೆ ಸುಮಾರು ಒಂದುವರೆ ಕೋಟಿ ರೂಪಾಯಿ. 2026ರ ಫಿಫಾ ವಿಶ್ವಕಪ್‍ನ ನೆನಪಿಗಾಗಿ 2026 ಉಂಗುರಗಳನ್ನು ಮಾತ್ರ ವಿನ್ಯಾಸ ಮಾಡಲಾಗಿದೆ. ಇದರಲ್ಲಿ 30 ಉಂಗುರಗಳನ್ನು ವಿಜೇತ ತಂಡದ ಆಟಗಾರರಿಗೆ ಮತ್ತು ಸಿಬ್ಬಂದಿಗಳಿಗೆ ನೀಡಲಾಗುತ್ತದೆ. ಇನ್ನುಳಿದ 1996 ಉಂಗುರಗಳನ್ನು ಲೈಸನ್ಸ್ ಪಡೆದ ಉತ್ಪನ್ನವಾಗಿ ಅಭಿಮಾನಿಗಳಿಗೆ ಮಾರಾಟವಾಗಲಿದೆ.
ಒಟ್ಟಿನಲ್ಲಿ ಫಿಫಾ ವಿಶ್ವಕಪ್‍ನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. ಕಿರೀಟಕ್ಕೆ ಫಿಫಾ ಟ್ರೋಫಿಯ ಗರಿ, ಕೊರಳಿಗೆ ಚಿನ್ನದ ಪದಕ. ಕೈ ಬೆರಳಿಗೆ ಫಿಫಾ ಚಾಂಪಿಯನ್‍ಶಿಪ್ ರಿಂಗ್. ಇದು ಈ ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್ನರ ಹೆಮ್ಮೆಯ ಸಂಕೇತವಾಗಲಿದೆ. ಹಾಗಾಗಿ .ಈ ಬಾರಿಯ ಫಿಫಾ ವಿಶ್ವಕಪ್ ಮುದ್ರೆಯ ಉಂಗುರ, ಅರ್ಜೆಂಟಿನಾದ ಮೆಸ್ಸಿ ಹುಡುಗರ ಕೈ ಬೆರಳನ್ನು ಅಲಂಕರಿಸುತ್ತಾ..? ಸ್ಪೇನ್‍ನ ಯಮಲ್ ಗೆಳೆಯರ ಕೈ ಬೆರಳಿನ ಅಂದವನ್ನು ಹೆಚ್ಚಿಸುತ್ತಾ…? ಉತ್ತರಕ್ಕೆ ಫುಟ್‍ಬಾಲ್ ಜಗತ್ತು ಕಾಯುತ್ತಿದೆ..!
ಸನತ್ ರೈ








