ಹುಬ್ಬಳ್ಳಿ : ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ದೇಶದೆಲ್ಲೆಡೆ ಕೂಗು ಕೇಳಿ ಬಂದಿತ್ತು. ಹೀಗಾಗಿ ಭಾರತ ಸರ್ಕಾರ ಸೋಮವಾರ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿ ಆದೇಶ ನೀಡಿದೆ. ಇದರಿಂದ ಚೀನಾ ಆಪ್ ಗಳಿಗೆ ಪರ್ಯಾಯ ಆಪ್ ಗಳ ಹುಡುಕಾಟ ಎಲ್ಲೆಡೆ ಆರಂಭವಾಗಿದ್ದು, ಪ್ರಮುಖ ಫೈಲ್ ಶೇರಿಂಗ್ ಆಪ್ ಶೇರ್ ಇಟ್ ಗೆ ಪರ್ಯಾಯವಾಗಿ ಝೆಡ್ ಶೇರ್ ಆಪ್ ಬಿಡುಗಡೆಯಾಗಿದೆ.
ಹೌದು..! ಚೀನಾ ಮೂಲದ ಶೇರ್ ಇಟ್ ಆಪ್ ಗೆ ಕರ್ನಾಟಕದ ಧಾರವಾಡ ಮೂಲದ ವಿದ್ಯಾರ್ಥಿ ಸಡ್ಡು ಹೊಡೆದು ತನ್ನದೇ ವಿನೂತನ ವೇಗದ ದತ್ತಾಂಶ ರವಾನೆ ಮತ್ತು ಸ್ವೀಕರಿಸಬಲ್ಲ ಆಪ್ ಅನ್ನು ಸಿದ್ಧಪಡಿಸಿದ್ದಾರೆ. ಅದಕ್ಕೆ ಝೆಡ್ ಶೇರ್ ಆಪ್ ಎಂದು ಹೆಸರಿಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕನ್ಸೂರು ಗ್ರಾಮದ ನಿವಾಸಿ ಶ್ರವಣ್ ವಂಸತ್ ಹೆಗ್ಡೆ ಇದನ್ನು ಅಭಿವೃದ್ಧಿ ಪಡಿಸಿದ್ದಾರೆ. ಶ್ರವಣ್ ವಂಸತ್ ಹೆಗ್ಡೆ ಧಾರವಾಡದ ಸಿಎಸ್ ಐ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಝೆಡ್ ಶೇರ್ ಪ್ರತೀ ಸೆಕೆಂಡ್ ಗೆ 6 ರಿಂದ 10 ಎಂಬಿಪಿಎಸ್ ವರೆಗಿನ ವೇಗದಲ್ಲಿ ಫೈಲ್ ಶೇರ್ ಮಾಡುತ್ತದೆ. ಈ ಆಪ್ ನಲ್ಲಿ ಎಲ್ಲ ರೀತಿಯ ಅಂದರೆ, ಫೋಟೋ, ವಿಡಿಯೋ, ಪಿಡಿಎಫ್, ಆಪ್ ಗಳು ಸೇರಿದಂತೆ ಬಹುತೇಕ ಎಲ್ಲ ರೀತಿಯ ಫೈಲ್ ಗಳನ್ನು ಶೇರ್ ಮಾಡಬಹುದು. ಈ ಆಪ್ ಅನ್ನು ಈ ವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ಇನ್ ಸ್ಟಾಲ್ ಮಾಡಿಕೊಂಡಿದ್ದು, ಪ್ಲೇ ಸ್ಟೋರ್ ನಲ್ಲಿ 3.9 ರೇಟಿಂಗ್ ಪಡೆದುಕೊಂಡಿಗೆ. ಅಂತೆಯೇ ಈ ಆಪ್ ಕುರಿತಂತೆ ಸುಮಾರು 2 ಸಾವಿರ ರಿವ್ಯೂಗಳು ಬಂದಿದೆ.