ಮತ್ತೆ ಫೇಸ್ ಬುಕ್ ಗೆ ಮರಳಿದ ‘ಪದ್ಮಾವತಿ’
ಬೆಂಗಳೂರು : ನಟಿ, ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಒಂದು ವರ್ಷದ ಬಳಿಕ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆಗಿದ್ದಾರೆ.
ಕೇರಳದಲ್ಲಿ ಪೈನಾಪಲ್ ನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆಯನ್ನು ಹತ್ಯೆ ಮಾಡಿರುವುದನ್ನು ಫೇಸ್ ಬುಕ್ ನಲ್ಲಿ ರಮ್ಯಾ ಖಂಡಿಸಿದ್ದು, ಆನೆಯನ್ನು ಹತ್ಯೆ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಡೆಯುತ್ತಿರುವ ಸಹಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಲ್ಲದೆ ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಸ್ಟೇ ಸೇಫ್! ಈ ಅಭಿಯಾನಕ್ಕೆ ಸಹಿ ಹಾಕಿ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಮೋಹಕ ತಾರೆ ರಮ್ಯಾ ಅವರು 2019ರ ಮೇ 29 ರಂದು ಕೊನೆಯಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕಳೆದೊಂದು ವರ್ಷದಿಂದ ಅವರು ಎಲ್ಲಿದ್ದರೂ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. 2016ರ ನಾಗರಹಾವು ರಮ್ಯಾ ಅವರ ಕೊನೆಯ ಸಿನಿಮಾ ಆಗಿದೆ.
ಏನಿದು ಆನೆ ಕೊಂದ ಪ್ರಕರಣ ?
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಪಾಪಿಗಳು ಪೈನಾಪಲ್ ಹಣ್ಣಿನ ಒಳಗಡೆ ಪಟಾಕಿ ಇಟ್ಟು ತಿನ್ನಿಸಿದ್ದು, ಪಟಾಕಿ ಸಿಡಿದು ಆನೆ ಮೃತಪಟ್ಟಿತ್ತು. ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಆನೆಯ ಹತ್ಯೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಸಿನಿಮಾ ತಾರೆಯರೂ ಕೈ ಜೋಡಿಸುತ್ತಿದ್ದಾರೆ.








