ಹುಬ್ಬಳ್ಳಿ: ಪ್ರತಿಭಟನೆಯ ನಂತರ ಕೊನೆಗೂ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್, ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು. ಆದರೆ, ಅವರು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಶಾಸಕ ಅರವಿಂದ ಬೆಲ್ಲದ್ ಹಾಗೂ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಎರಡು ದಿನಗಳಿಂದಲೂ ಹೋರಾಟ ನಡೆಯುತ್ತಿತ್ತು. ಆದರೆ, ಈಗ ಅನುಮತಿ ಸಿಕ್ಕಿದೆ ಎನ್ನಲಾಗಿದೆ.
ಪಾಲಿಕೆ ಬಿಜೆಪಿ ಆಡಳಿತದಲ್ಲಿದೆ. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಳೆದ ವರ್ಷ ಠರಾವು ಪಾಸ್ ಮಾಡಿ ಗಣೇಶೊತ್ಸವಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಅಂಜುಮನ್ ಸಂಸ್ಥೆ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಮೈದಾನ ಪಾಲಿಕೆ ಆಸ್ತಿಯಾಗಿದ್ದು ಸಾರ್ವಜನಿಕ ಬಳಕೆಗೆ ಕೊಡಬಹುದು ಎಂದು ಕೋರ್ಟ್ ಆದೇಶಿಸಿತ್ತು. ಹೀಗಾಗಿ ಬಿಜೆಪಿ ಶಾಸಕರು ಕಾರ್ಯಕರ್ತರು ಅನುಮತಿಗೆ ಪಟ್ಟು ಹಿಡದಿದ್ದರು.








