ಬೆಂಗಳೂರು : ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188, 270, 271 ಹಾಗೂ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಇಮ್ರಾನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಧಿಕಾರಿಗಳು ನಿನ್ನೆ ಪಾದರಾಯನಪುರಕ್ಕೆ ಹೋಗಿದ್ದರು. ಆದ್ರೆ ಈ ವೇಳೆ ಇಮ್ರಾನ್ ಪಾಷಾ ಮನೆ ಬಳಿ ಹೈಡ್ರಾಮಾ ಸೃಷ್ಟಿಸಿ ನೂರಾರು ಜನ ಸೇರುವಂತೆ ಮಾಡಿದ್ದರು. ಈ ಸಂಬಂಧ ಆರೋಗ್ಯ ಅಧಿಕಾರಿಗಳು ಜೆಜೆ ನಗರ ಪೊಲೀಸರಿಗೆ ದೂರು ನೀಡಿದ್ದರು. ಆರೋಗ್ಯ ಅಧಿಕಾರಿಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶುಕ್ರವಾರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿನ್ನೆ ಅಧಿಕಾರಿಗಳು ಪಾದರಾಯನಪುರದ ಅವರ ಮನೆಗೆ ಹೋಗಿದ್ದರು. ಈ ವೇಳೆ ಇಮ್ರಾನ್ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿ ಮೊಂಡಾಟ ಪ್ರದರ್ಶಿಸಿದ್ದರು. ಮನೆ ಬಳಿಗೆ ಪೊಲೀಸರು, ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಬಂದರೂ ಇಮ್ರಾನ್ ಪಾಷಾ ಮನೆಯಿಂದ ಹೊರಬರಲಿಲ್ಲ. .
ಕೊನೆಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ ಬಳಿಕ ಇಮ್ರಾನ್ ಪಾಷಾ ಪಿಪಿಇ ಕಿಟ್ ಸಮೇತ ಮನೆಯಿಂದ ಹೊರಬಂದು, ಜನರತ್ತ ಕೈಬೀಸಿ ಅಂಬುಲೆನ್ಸ್ ಹತ್ತಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು.
ಸದ್ಯ ಇಮ್ರಾನ್ ಅವರ ಸಂಪರ್ಕದಲ್ಲಿದ್ದ 200 ಕ್ಕೂ ಹೆಚ್ಚು ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇನ್ನೊಂದೆಡೆ ಕಾರ್ಪೊರೇಟರ್ ನಡುವಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.








