ಬೆಂಗಳೂರು, ಜೂನ್ 3 : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೊರರಾಜ್ಯದಿಂದ ಅದರಲ್ಲೂ ಮಹಾರಾಷ್ಟದಿಂದ ರಾಜ್ಯಕ್ಕೆ ಮರಳಿದವರಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ರಾಜ್ಯದ ನೆಮ್ಮದಿ ಕೆಡಿಸಿದೆ. ಈ ನಡುವೆ ಹೊರರಾಜ್ಯದಿಂದ ಬರುತ್ತಿರುವವರು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ವರದಿಯಾಗಿದೆ.
ಇದೀಗ ಸಿಎಂ ಬಿ. ಎಸ್. ಯಡಿಯೂರಪ್ಪ ಕ್ವಾರೆಂಟೈನ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆಯ ನಂತರ ರಾಜ್ಯದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ 14 ದಿನಗಳ ಹೋಂ ಕ್ವಾರೆಂಟೈನ್ ಉಲ್ಲಂಘಿಸಿದವರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ
ಲಾಕ್ ಡೌನ್ ಸಡಿಲಿಕೆ ನಂತರ ಹೊರ ರಾಜ್ಯದಿಂದ ಬರುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಕೊರೋನಾ ನಿಯಂತ್ರಣಕ್ಕಾಗಿ ಸಿಎಂ ಬಿ. ಎಸ್. ಯಡಿಯೂರಪ್ಪ ಈ ರೀತಿಯ ಸೂಚನೆ ನೀಡಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚಿರುವ ಉಡುಪಿ, ರಾಯಚೂರು, ಕಲಬುರಗಿ, ವಿಜಯಪುರ, ಯಾದಗಿರಿ, ಬೆಳಗಾವಿಯ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ಸಿಎಂ ಯಡಿಯೂರಪ್ಪ ರಾಜ್ಯದಾದ್ಯಂತ ಕ್ವಾರೆಂಟೈನ್ನಲ್ಲಿ ಇರುವವರ ಬಗ್ಗೆ ವಿಶೇಷ ಗಮನ ನೀಡಬೇಕೆಂದು ಹೇಳಿದ್ದಾರೆ.








