ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಎಫ್‌ಐಆರ್ ದಾಖಲಾಗಿದೆ.
ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ಮೋದಿ, ಪಿಎಂ ಕೇರ್ ಫಂಡ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೆ ಪಿಎಂ ಕೇರ್ ಫಂಡ್ ಫ್ರಾಡ್ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದೆ ಎಂದು ಆರೋಪಿಸಿ ಸಾಗರ ಪಟ್ಟಣ ಠಾಣೆಯಲ್ಲಿ ವಕೀಲ ಪ್ರವೀಣ್ ಎಂಬುವವರು ಸೋನಿಯಾ ಗಾಂಧಿಯವರ ವಿರುದ್ಧ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಐಎನ್‌ಸಿ ಕಚೇರಿಯಿಂದ ತಪ್ಪು ಸಂದೇಶಗಳನ್ನ ಹರಿಬಿಡಲಾಗಿದ್ದು, ಭಾರತ ಸರ್ಕಾರದ ಬಗ್ಗೆ ಅಪನಂಬಿಕೆ ಹುಟ್ಟುಹಾಕಲಾಗುತ್ತಿದೆ ಎಂದು ದೂರಿನಲ್ಲಿ ವಕೀಲರು ಆರೋಪಿಸಿದ್ದಾರೆ
ವಕೀಲ ಪ್ರವೀಣ್ ಅವರು ನೀಡಿದ ದೂರು ಆಧರಿಸಿ ಸಾಗರ ಪಟ್ಟಣ ಠಾಣೆ ಪೊಲೀಸರು, ಐಪಿಸಿ ಸೆಕ್ಷನ್ 153 ಮತ್ತು 505(1) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








