ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಐವರು ಬಲಿಯಾಗಿದ್ದಾರೆ. ಕಲಬುರಗಿ, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡದಲ್ಲಿ ಶುಕ್ರವಾರ ಕೆಲಕಾಲ ಉತ್ತಮ ಮಳೆ ಸುರಿದಿದ್ದು, ಬೀದರ್‌ನಲ್ಲಿ ಸಾಧಾರಣ ಮಳೆಯಾಗಿದೆ. ಕೊಪ್ಪಳ, ಉತ್ತರ ಕನ್ನಡ, ಗದಗದಲ್ಲಿ ಭಾರೀ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬೆಳೆಗಳು ಕೂಡ ಹಾನಿಯಾಗಿವೆ.
ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಕನೂರು ತಾಲೂಕು, ಗದಗ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆಯ ಅಬ್ಬರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲೂ ಆಲಿಕಲ್ಲು ಸಹಿತ ಒಂದು ಗಂಟೆ ಕಾಲ ಅಬ್ಬರದ ಮಳೆ ಸುರಿದಿದ್ದು, ಧಾರವಾಡ ಜಿಲ್ಲೆಯಲ್ಲೂ ಕೆಲಕಾಲ ಉತ್ತಮ ಮಳೆಯಾಗಿದೆ.
ಗದಗ ತಾಲೂಕಿನ ಲಿಂಗದಾಳದಲ್ಲಿ ಕುರಿ ಮೇಯಿಸಲು ತೆರಳಿದ್ದ ಶರಣಪ್ಪ (16), ದೇವೇಂದ್ರಪ್ಪ (16) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಿಲ್ವಾಡ (ಬಿ) ಗ್ರಾಮದ ರೈತ ಭೋಗಪ್ಪ (60) ಕೃಷಿ ಕೆಲಸ ಮಾಡುತ್ತಿದ್ದಾಗ ಬಲಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಯಂಕುಬಾಯಿ ಕುಲಕರ್ಣಿ (79), ಶಾರವ್ವಾ ಪತ್ತಾರ (58) ಅವರು ಮಳೆಯಿಂದಾಗಿ ನೆನೆದಿದ್ದ ಮನೆಯ ಛಾವಣಿ ಕುಸಿದು ಸಾವನ್ನಪ್ಪಿದ್ದಾರೆ.








