ರುಚಿಕರ ಅಡುಗೆ ರೆಸಿಪಿಗಳು…!

1 min read
Saakshatv cooking recipe Gobi Manchurian

ರುಚಿಕರ ಅಡುಗೆ ರೆಸಿಪಿಗಳು…!

ಕ್ಯಾಬೇಜ್ ಮಂಚೂರಿ

ಬೇಕಾಗುವ ಸಾಮಾಗ್ರಿಗಳು

ಸಣ್ಣಗೆ ಹೆಚ್ಚಿದ ಕ್ಯಾಬೇಜ್ – 2 ಕಪ್
ಕ್ಯಾರೆಟ್ – 1
ಮೆಣಸಿನ ಪುಡಿ – 1/2 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮೈದಾ – 1/2 ಕಪ್
ಕಾರ್ನ್ ಪ್ಲೋರ್ – 2 ಟೀಸ್ಪೂನ್
ನೀರು – 2 ಟೀಸ್ಪೂನ್
ಬೆಳ್ಳುಳ್ಳಿ – 6 ಎಸಳು
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಕ್ಯಾಪ್ಸಿಕಂ/ದೊಣ್ಣೆ ಮೆಣಸು – 1/2 ಕಪ್
ಟೊಮೆಟೊ ಸಾಸ್ – 1 ಟೀಸ್ಪೂನ್
ಗ್ರೀನ್ ಚಿಲ್ಲಿ ಸಾಸ್ – 1 ಟೀಸ್ಪೂನ್
ರೆಡ್ ಚಿಲ್ಲಿ ಸಾಸ್ – 1 ಟೀಸ್ಪೂನ್
ಸೋಯಾ ಸಾಸ್ – 2 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
Saakshatv cooking recipe cabbage Manchurian

ಮಾಡುವ ವಿಧಾನ

ಮೊದಲಿಗೆ ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಕ್ಯಾಬೇಜ್, ತುರಿದ ಕ್ಯಾರೆಟ್ ಸೇರಿಸಿ. ನಂತರ ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೈದಾ, ಕಾರ್ನ್ ಪ್ಲೋರ್, ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಎರಡು ಟೇಬಲ್ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ.
ಈಗ ಕಡಾಯಿಯಲ್ಲಿ ಎಣ್ಣೆಯನ್ನು ‌ಬಿಸಿ ಮಾಡಿ ಮಾಡಿಟ್ಟುಕೊಂಡ ಉಂಡೆಗಳನ್ನು ಕೆಂಪಗಾಗುವವರೆಗೆ ಹುರಿದು ತೆಗೆಯಿರಿ.
ಬಳಿಕ ಪಾನ್ ಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ದೊಣ್ಣೆ ಮೆಣಸು ಸೇರಿಸಿ. ಬಳಿಕ ಟೊಮೆಟೊ ಸಾಸ್, ಗ್ರೀನ್ ಚಿಲ್ಲಿ ಸಾಸ್, ರೆಡ್ ಚಿಲ್ಲಿ ಸಾಸ್, ವಿನೆಗರ್, ಸೋಯಾ ಸಾಸ್ ಗಳನ್ನು ಮಿಶ್ರ ಮಾಡಿ. ನಂತರ ಸ್ವಲ್ಪ ಉಪ್ಪನ್ನು ಉದುರಿಸಿ. ಈಗ ಇದಕ್ಕೆ ಹುರಿದಿಟ್ಟ ಕ್ಯಾಬೇಜ್ ಉಂಡೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ರುಚಿಯಾದ ಕ್ಯಾಬೇಜ್ ಮಂಚೂರಿ ಸವಿಯಲು ಸಿದ್ಧವಾಗಿದೆ.

ಮದ್ದೂರು ವಡೆ

ರವಾ ಗೋಳಿ ಬಜೆ

ಬೇಕಾಗುವ ಸಾಮಗ್ರಿಗಳು :

ಚಿರೋಟಿ ರವೆ – 1ಕಪ್
ಸೋಡಾ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮೊಸರು‌ 1/2 ಕಪ್
ಜೀರಿಗೆ – 1 ಚಮಚ
ಹೆಚ್ಚಿದ ಹಸಿಮೆಣಸಿನಕಾಯಿ – 1
ತುರಿದ ಶುಂಠಿ – 1ಇಂಚು
ಕರಿಬೇವು, ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಕ್ಕರೆ – 1 ಚಮಚ
Saakshatv cooking recipes goli baje

ಮಾಡುವ ‌ವಿಧಾನ

ಮೊದಲಿಗೆ ಚಿರೋಟಿ ರವೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಒಂದು ಅಗಲವಾದ ಪಾತ್ರೆಗೆ ಹಾಕಿ. ನಂತರ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಜೀರಿಗೆ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಸಕ್ಕರೆ ‌ಸೇರಿಸಿ ಚೆನ್ನಾಗಿ ಕಲಸಿ. 2 ಗಂಟೆಗಳ ಕಾಲ ಹಾಗೆಯೇ ಬಿಡಿ. ‌
ನಂತರ ಸೋಡಾ ಸೇರಿಸಿ ಬೆರೆಸಿ. ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. 3 ಗಂಟೆಗಳ ನಂತರ, ಹಿಟ್ಟನ್ನು ಮತ್ತೆ ಕಲಸಿ, ಸಣ್ಣ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ‌ ಮಾಡಿ, ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ.‌ ಮಧ್ಯಮ ಜ್ವಾಲೆಯಲ್ಲಿ ಎರಡೂ ಬದಿಗಳನ್ನು ಹುರಿಯಿರಿ. ಗೋಳಿ ಬಜೆ ಹೊಂಬಣ್ಣಕ್ಕೆ ತಿರುಗಿದ ಬಳಿಕ ಮತ್ತು ಗರಿಗರಿಯಾದ ನಂತರ ಅದನ್ನು ತೆಗೆಯಿರಿ.

ಪಾವ್ ಭಾಜಿ

ಸೋರೆಕಾಯಿ ಮಸಾಲೆ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು

ಅಕ್ಕಿ ಹಿಟ್ಟು – 2ಕಪ್
ಜೀರಿಗೆ – 1ಚಮಚ
ಇಂಗು -1/4 ಚಮಚ
ಅರಿಶಿನ – 1/4 ಚಮಚ
ಕರಿಮೆಣಸಿನ ಪುಡಿ – 1/4 ಚಮಚ
ಕಡ್ಲೆಬೇಳೆ – 2 ಚಮಚ
ಸೋರೆಕಾಯಿತುರಿ‌ – 1/4 ಕಪ್
ಸಣ್ಣಗೆ ಹೆಚ್ಚಿದ ಸಬ್ಬಸಿಗೆಸೊಪ್ಪು – 1 ಕಪ್
ಕೊತ್ತಂಬರಿಸೊಪ್ಪು – ಸ್ವಲ್ಪ
ಹಸಿಮೆಣಸಿನಕಾಯಿ – 2
ಕರಿಬೇವಿನ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe sorekayi masala rotti

ಮಾಡುವ ವಿಧಾನ

ಮೊದಲಿಗೆ ಕಡ್ಲೆಬೇಳೆಯನ್ನು ‌30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಜೀರಿಗೆ, ಇಂಗು, ಅರಿಶಿನ, ಕರಿಮೆಣಸಿನ ಪುಡಿ, ಸೋರೆಕಾಯಿತುರಿ, ಸಬ್ಬಸಿಗೆಸೊಪ್ಪು, ಕೊತ್ತಂಬರಿ ಸೊಪ್ಪು, ನೆನೆಸಿಟ್ಟ ಕಡ್ಲೆಬೇಳೆ, ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕರಿಬೇವು, ಉಪ್ಪು, 1 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿ. ‌‌
ನಂತರ ಸ್ವಲ್ಪ ‌ಸ್ವಲ್ಪವೇ ಬೆಚ್ಚಗಿರುವ ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. 15 ರಿಂದ 20ನಿಮಿಷಗಳ ಕಾಲ ಹಾಗೆಯೇ ಮುಚ್ಚಿಡಿ.
ಬಳಿಕ ತವಾ ವನ್ನು ಬಿಸಿ ಮಾಡಿ. ತೆಳುವಾಗಿ ರೊಟ್ಟಿ ತಟ್ಟಿ, ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ಬರುವವರೆಗೆ ಕಾಯಿಸಿ ತೆಗೆಯಿರಿ. ‌ರುಚಿಯಾದ ಸೋರೆಕಾಯಿ ಮಸಾಲೆ ರೊಟ್ಟಿ ಸವಿಯಲು ಸಿದ್ಧ.

ಸೋಯಾ ಚಂಕ್ಸ್ ಮಂಚೂರಿ

ಬೇಕಾಗುವ ಸಾಮಾಗ್ರಿಗಳು

ಸೋಯಾ ಚಂಕ್ಸ್ – 1 ಕಪ್
ಮೊಸರು – 4 ಚಮಚ
ಮೈದಾ ಹಿಟ್ಟು – 2 ಚಮಚ
ಕಾರ್ನ್ ಫ್ಲೋರ್ – 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಮೆಣಸಿನ ಪುಡಿ – 1 ಚಮಚ
ಗರಂ ಮಸಾಲ – 1/2 ಚಮಚ
ಚಾಟ್ ಮಸಾಲಾ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 2 ಚಮಚ
ಬೆಳ್ಳುಳ್ಳಿ – 5 ಎಸಳು
ಈರುಳ್ಳಿ – 1
ಹಸಿಮೆಣಸು – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
ರೆಡ್ ಚಿಲ್ಲಿ ಸಾಸ್ – 1 ಚಮಚ
ಟೊಮೆಟೊ ಸಾಸ್ – 1 ಚಮಚ
ಸೋಯಾ ಸಾಸ್ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹುರಿಯಲು ಎಣ್ಣೆ

Saakshatv cooking recipe soya

ಮಾಡುವ ವಿಧಾನ

ಮೊದಲಿಗೆ ಸೋಯಾ ಚಂಕ್ಸ್ ಅನ್ನು ಬಿಸಿನೀರಿನಲ್ಲಿ 10 ನಿಮಿಷ ನೆನೆಸಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದು ನೀರನ್ನು ಹಿಂಡಿ ತೆಗೆಯಿರಿ.
ನಂತರ ಒಂದು ಪಾತ್ರೆಗೆ ಮೊಸರು, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಮೆಣಸಿನ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಸೋಯಾ ಚಂಕ್ಸ್ ಹಾಕಿ ಚೆನ್ನಾಗಿ ಬೆರೆಸಿ, ಅರ್ಧ ಗಂಟೆ ಹಾಗೆಯೇ ಬಿಡಿ.
ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ‌ಸೋಯಾ ಚಂಕ್ಸ್ ಗಳನ್ನು ಡೀಪ್ ಫ್ರೈ ಮಾಡಿ ಪಕ್ಕದಲ್ಲಿರಿಸಿಕೊಳ್ಳಿ.

ಈಗ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್, ಸೋಯಾ ಸಾಸ್ ಸೇರಿಸಿ. ಇದಕ್ಕೆ ಕಾರ್ನ್ ಫ್ಲೋರ್ ನೀರಿನಲ್ಲಿ ಕಲೆಸಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಹುರಿದಿಟ್ಟುಕೊಂಡ ‌ಸೋಯಾ ಚಂಕ್ಸ್ ಸೇರಿಸಿ ಚೆನ್ನಾಗಿ ಕಲಸಿ. ‌ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು‌ ಉದುರಿಸಿದರೆ ಸೋಯಾ ಚಂಕ್ಸ್ ಮಂಚೂರಿ ಸವಿಯಲು ‌ಸಿದ್ಧ.

ಬಟಾಣಿ ಬಾತ್

ಬೇಕಾಗುವ ಸಾಮಾಗ್ರಿಗಳು

ಅಕ್ಕಿ 1 ಕಪ್
ನೆನೆಸಿದ ಒಣ ಬಟಾಣಿ/ಹಸಿ ಬಟಾಣಿ – 1ಕಪ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸು – 3
ಕೆಂಪು ಮೆಣಸು – 5
ಕೊತ್ತಂಬರಿಸೊಪ್ಪು – ಸ್ವಲ್ಪ
ಶುಂಠಿ ಬೆಳ್ಳುಳಿ ಪೇಸ್ಟ್ – 1 ಚಮಚ
ಗರಂಮಸಾಲೆ ಪುಡಿ – 1 ಚಮಚ
ಚೆಕ್ಕೆ – 1 ಇಂಚು
ಲವಂಗ – 2
ಮರಾಠಿಮೊಗ್ಗು – 2
ಏಲಕ್ಕಿ – 2
ಪಲಾವ್ ಎಲೆ – 1
ರುಚಿಗೆ ತಕ್ಕಷ್ಟು ಉಪ್ಪು.
ಎಣ್ಣೆ/ತುಪ್ಪ – 2 ಚಮಚ
Saakshatv cooking recipes batani bath

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ತೊಳೆದು ನೀರನ್ನು ಸೋಸಿ ಪಕ್ಕದಲ್ಲಿ ಇಡಿ. ಬಳಿಕ ಕೆಂಪು ಮೆಣಸುಗಳನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ನಂತರ ಮಿಕ್ಸಿ ಜಾರಿನಲ್ಲಿ ಹಸಿಮೆಣಸಿನಕಾಯಿ. ಕೊತ್ತಂಬರಿಸೊಪ್ಪು ಮತ್ತು ನೆನೆಸಿದ ಕೆಂಪು ಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ.

ಈಗ ಕುಕ್ಕರಿಗೆ ಎಣ್ಣೆ ಅಥವಾ ತುಪ್ಪ ಹಾಕಿ. ಬಿಸಿಯಾದ ಮೇಲೆ ಚೆಕ್ಕೆ, ಲವಂಗ, ಮರಾಠಿಮೊಗ್ಗು, ಏಲಕ್ಕಿ, ಪಲಾವ್ ಎಲೆ ಸೇರಿಸಿ. ‌ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ. ಬಳಿಕ ಶುಂಠಿ. ಬೆಳ್ಳುಳಿ ಪೇಸ್ಟ್, ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಗರಂ ಮಸಾಲೆ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ.
ನಂತರ ಬಟಾಣಿ, ಅಕ್ಕಿ, ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 3 ವಿಷಲ್ ಬರುವವರೆಗೆ ಬೇಯಿಸಿ.
ಈಗ ರುಚಿಯಾದ ಬಟಾಣಿ ಬಾತ್ ಸವಿಯಲು ಸಿದ್ಧ.

ಮಾವಿನ ಹಣ್ಣಿನ ಸೆವೆನ್ ಕಪ್ ಬರ್ಫಿ

ಬೇಕಾಗುವ ಪದಾರ್ಥಗಳು

ಕಡಲೆಹಿಟ್ಟು – 1 ಕಪ್
ಮಾವಿನಹಣ್ಣಿನ ಹೋಳು – 1 ಕಪ್
ತೆಂಗಿನ ತುರಿ – 1 ಕಪ್
ತುಪ್ಪ – 1 ಕಪ್
ಸಕ್ಕರೆ – 2.5 ಕಪ್
ಹಾಲು – 1 ಕಪ್
ಏಲಕ್ಕಿ ಪುಡಿ – ಸ್ವಲ್ಪ
Saakshatv cooking recipe mango seven cup sweet

ಮಾಡುವ ವಿಧಾನ

ಮೊದಲಿಗೆ ಒಂದು ಟ್ರೇ ಗೆ ತುಪ್ಪವನ್ನು ಸವರಿ ಇಟ್ಟುಕೊಳ್ಳಿ.
ನಂತರ ತೆಂಗಿನ ತುರಿಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ಸ್ವಲ್ಪ ರುಬ್ಬಿ ತೆಗೆದು ನಂತರ ಮಾವಿನಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿ ಹುರಿಯಲು ಪ್ರಾರಂಭಿಸಿ. ಮಧ್ಯಮ ಉರಿಯಲ್ಲಿ ಸ್ವಲ್ಪ ಪರಿಮಳ ಬರುವವರೆಗೆ ಹುರಿದು ನಂತರ ಸಕ್ಕರೆಯನ್ನು ಸೇರಿಸಿ, ಹುರಿಯಿರಿ. ನಂತರ ರುಬ್ಬಿದ ತೆಂಗಿನ ತುರಿ ಮತ್ತು ಮಾವಿನಹಣ್ಣನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಹಾಲನ್ನು ಸೇರಿಸಿ ಚೆನ್ನಾಗಿ ಕಲಸಿ, ಮಗುಚುವುದನ್ನು ಮುಂದುವರೆಸಿ. ಬಳಿಕ ತುಪ್ಪವನ್ನು ಸೇರಿಸಿ ಮಗುಚುತ್ತಾ ಇರಿ. ತುಪ್ಪ ಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಸೇರಿಸಿ ಬೆರೆಸಿ, ಸ್ಟವ್ ಆಫ್ ಮಾಡಿ. ನಂತರ ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಈಗ ರುಚಿಯಾದ ಮಾವಿನಹಣ್ಣಿನ ಸೆವೆನ್ ಕಪ್ ಬರ್ಫಿ ಸವಿಯಲು ರೆಡಿಯಾಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd