ಹಲಸಿನ ಹಣ್ಣಿನ ಮುಳಕ
ಬೇಕಾಗುವ ಪದಾರ್ಥಗಳು
ಚಿಕ್ಕದಾಗಿ ಕತ್ತರಿಸಿದ ಹಲಸಿನ ಹಣ್ಣಿನ ತೊಳೆ – 2 ಕಪ್
ಅಕ್ಕಿ – 1 ಕಪ್
ತುರಿದ ತೆಂಗಿನಕಾಯಿ – 1/2 ಕಪ್
ಬೆಲ್ಲ – 1/2 ಕಪ್
ಏಲಕ್ಕಿ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – ಕರಿಯಲು

ಮಾಡುವ ವಿಧಾನ
ಮೊದಲು ಅಕ್ಕಿಯನ್ನು ಒಂದೆರಡು ಗಂಟೆಗಳವರೆಗೆ ನೆನೆಸಿಡಿ. ನಂತರ ನೆನೆಸಿದ ಅಕ್ಕಿಯನ್ನು ಸೋಸಿ ನೀರನ್ನು ತೆಗೆಯಿರಿ.
ಬಳಿಕ ಅಕ್ಕಿ, ಹಲಸಿನ ಹಣ್ಣಿನ ತೊಳೆ, ತುರಿದ ತೆಂಗಿನಕಾಯಿ, ಬೆಲ್ಲ, ಏಲಕ್ಕಿ, ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈ ಹಿಟ್ಟು ಇಡ್ಲಿ ಹಿಟ್ಟಿಗಿಂತಲೂ ಗಟ್ಟಿ ಇರಬೇಕು.
ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಚಿಕ್ಕ ಚಿಕ್ಕ ಉಂಡೆಯಂತೆ ಮಾಡಿ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ. ಈಗ ರುಚಿಯಾದ ಹಲಸಿನ ಮುಳಕ ಸವಿಯಲು ಸಿದ್ಧ.
ಕೆಸುವಿನ ಚಟ್ನಿ
ಬೇಕಾಗುವ ಸಾಮಾಗ್ರಿಗಳು
ಕೆಸುವಿನ ಎಲೆ – 1
ಉದ್ದಿನಬೇಳೆ – 1.5 ಚಮಚ
ದನಿಯಾ – 1/2 ಚಮಚ
ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ತೆಂಗಿನಕಾಯಿತುರಿ – 1 ಕಪ್
ಕತ್ತರಿಸಿದ ಮಾವಿನಕಾಯಿ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ
ತೆಂಗಿನ ಎಣ್ಣೆ – 2 ಚಮಚ
ಉದ್ದಿನಬೇಳೆ – 1 ಚಮಚ
ಸಾಸಿವೆ – 1 ಚಮಚ
ಕಡಲೆಬೇಳೆ – 1/2 ಚಮಚ
ಇಂಗು – ಚಿಟಕಿ
ಕರಿಬೇವು – ಸ್ವಲ್ಪ
ಮುರಿದ ಕೆಂಪು ಮೆಣಸು – 2

ಮಾಡುವ ವಿಧಾನ
ಕೆಸುವಿನ ಎಲೆಯನ್ನು ತೊಳೆದು ಚಿಕ್ಕದಾಗಿ ಕತ್ತರಿಸಿ. ನಂತರ ನೀರು ಸೇರಿಸಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ
ಉದ್ದಿನಬೇಳೆ, ದನಿಯಾ, ಮೆಣಸಿನಕಾಯಿ, ಕರಿಬೇವು ಹಾಕಿ ಹುರಿದುಕೊಳ್ಳಿ.
ತಣ್ಣಗಾದ ನಂತರ ಅದಕ್ಕೆ ಬೇಯಿಸಿ ಇಟ್ಟುಕೊಂಡ ಕೆಸುವಿನ ಎಲೆ ಸೇರಿಸಿ. ನಂತರ ತೆಂಗಿನಕಾಯಿತುರಿ, ಮಾವಿನಕಾಯಿ, ಉಪ್ಪು ಹಾಕಿ ಚೆನ್ನಾಗಿ ರುಬ್ಬಿ.
ನಂತರ ಬಾಣಲೆಯಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಉದ್ದಿನಬೇಳೆ, ಕಡಲೆಬೇಳೆ, ಇಂಗು, ಕರಿಬೇವು, ಮುರಿದ ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಕೊಡಿ.
ಬಳಿಕ ರುಬ್ಬಿ ಇಟ್ಟುಕೊಂಡ ಚಟ್ನಿಗೆ ಒಗ್ಗರಣೆಯನ್ನು ಸೇರಿಸಿ. ರುಚಿಯಾದ ಕೆಸುವಿನ ಚಟ್ನಿ ಸವಿಯಲು ಸಿದ್ಧ.
ಸಬ್ಬಕ್ಕಿ – ಹೆಸರುಬೇಳೆ ದೋಸೆ
ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ 1/2 ಕಪ್
ಹೆಸರು ಬೇಳೆ 1 ಕಪ್
ಕ್ಯಾರೆಟ್ 1
ಈರುಳ್ಳಿ 1
ಟೊಮ್ಯಾಟೊ 1
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನಕಾಯಿ ತುರಿ 2 ಚಮಚ

ಮಾಡುವ ವಿಧಾನ
ಮೊದಲಿಗೆ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಅದನ್ನು 4 ಗಂಟೆಗಳ ಕಾಲ ಮುಳುಗುವಷ್ಟು ನೀರಿನಲ್ಲಿ ನೆನೆಯಲು ಬಿಡಿ.
ಹೆಸರುಬೇಳೆಯನ್ನು ಸಹ ಚೆನ್ನಾಗಿ ತೊಳೆದು 2 – 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ಬಳಿಕ ಸಬ್ಬಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ. ನಂತರ ಅದಕ್ಕೆ ಹೆಸರು ಬೇಳೆ ಸೇರಿಸಿ ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ರುಬ್ಬಿ. ಈ ಮಿಶ್ರಣಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ ಹಾಗೆಯೆ ಬಿಡಿ.
ನಂತರ ಕ್ಯಾರೆಟ್, ಈರುಳ್ಳಿ, ಟೊಮೆಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಚಿಕ್ಕದಾಗಿ ಕತ್ತರಿಸಿ ಅದಕ್ಕೆ ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಪಕ್ಕದಲ್ಲಿ ಇಡಿ.
ಈಗ ದೋಸೆ ತವೆಗೆ ತುಪ್ಪ ಸವರಿ ಬಿಸಿ ಮಾಡಿ. ದೋಸೆ ಹಿಟ್ಟು ಹೊಯ್ಯಿದು ಸ್ವಲ್ಪ ದಪ್ಪವಾಗಿ ದೋಸೆ ಮಾಡಿ. ಮೇಲೆ ತುಪ್ಪ ಹಾಕಿ ತರಕಾರಿಗಳ ಮಿಶ್ರಣವನ್ನು ಸಿಂಪಡಿಸಿ. ಇನ್ನೊಂದು ಬದಿ ತಿರುವಿ ಹಾಕಿ ಚೆನ್ನಾಗಿ ಕಾಯಿಸಿ. ಈಗ ರುಚಿಯಾದ ಸಬ್ಬಕ್ಕಿ ಹೆಸರುಬೇಳೆ ದೋಸೆ ಕಾಯಿಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.








