5 ಸಿಂಪಲ್ ಮತ್ತು ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
ಬೆಂಡೆಕಾಯಿ ಬಜ್ಜಿ
ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ – 1/4 ಕೆಜಿ
ಕಡಲೆ ಹಿಟ್ಟು – 1 ಕಪ್
ಸಣ್ಣ ರವೆ – 2 ಚಮಚ
ಕೆಂಪು ಮೆಣಸಿನ ಪುಡಿ – 1/2ಚಮಚ
ಚಾಟ್ ಮಸಾಲಾ – ಚಿಟಿಕೆಯಷ್ಟು
ಓಂಕಾಳು – ಚಿಟಿಕೆಯಷ್ಟು
ಅಡುಗೆ ಸೋಡಾ – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ
ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಸ್ವಚ್ಛವಾದ ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಬೆಂಡೆಕಾಯಿಗಳನ್ನು ಅರ್ಧಕ್ಕೆ ಕತ್ತರಿಸಿ ನಡುವೆ ಸೀಳಿ.
ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಸಣ್ಣ ರವೆ, ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ, ಓಂಕಾಳು, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರ ಮಾಡಿ. ನಂತರ ಬಜ್ಜಿಯ ಹಿಟ್ಟಿನ ಹದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ನಂತರ ಕತ್ತರಿಸಿದ ಬೆಂಡೆಕಾಯಿಗಳನ್ನು ಒಂದೊಂದಾಗಿ ಹಿಟ್ಟಲ್ಲಿ ಅದ್ದಿ ಕಾಯ್ದ ಎಣ್ಣೆಯಲ್ಲಿ ಕರಿದು ತೆಗೆಯಿರಿ.
ಮಂಡಕ್ಕಿ ದೋಸೆ ಮತ್ತು ಈರುಳ್ಳಿ ಚಟ್ನಿ
ಮಂಡಕ್ಕಿ ದೋಸೆಗೆ ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ – 2 ಕಪ್
ಮಂಡಕ್ಕಿ – 2 1/2 ಕಪ್
ಮೊಸರು – 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಈರುಳ್ಳಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ಈರುಳ್ಳಿಗಳು – 5
ತೆಂಗಿನಕಾಯಿ ತುರಿ – 1ಕಪ್
ಬೇಳೆ – 1 ಮುಷ್ಟಿ
ಕೆಂಪು ಮೆಣಸು – 10
ಬ್ಯಾಡಗಿ ಮೆಣಸು – 5
ಹುಣಸೆಹಣ್ಣಿನ ತಿರುಳು – 1 ಚಮಚ
ಬೆಲ್ಲ – ಸಣ್ಣ ತುಂಡು
ರುಚಿಗೆ ತಕ್ಕಷ್ಟು ಉಪ್ಪು

ದೋಸೆ ಮಾಡುವ ವಿಧಾನ
ಮೊದಲನೆಯದಾಗಿ ಅಕ್ಕಿಯನ್ನು ಮೊಸರಿನಲ್ಲಿ ಮತ್ತು ಮಂಡಕ್ಕಿಯನ್ನು ನೀರಿನಲ್ಲಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನಂತರ ಮಿಕ್ಸಿ ಜಾರಿಗೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ರುಬ್ಬಿದ ಹಿಟ್ಟನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ ರಾತ್ರಿಯಿಡೀ ಹುದುಗಲು ಹಾಗೆ ಬಿಡಿ.
ಬೆಳಿಗ್ಗೆ ಹಿಟ್ಟಿಗೆ ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿ. ನಂತರ ತವಾ ಬಿಸಿ ಮಾಡಿ ದೋಸೆ ಹುಯ್ಯಿರಿ.
ಈರುಳ್ಳಿ ಚಟ್ನಿ ಮಾಡುವ ವಿಧಾನ
ಮೊದಲಿಗೆ ಪಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಬೇಳೆ, ಕೆಂಪು ಮೆಣಸು, ಬ್ಯಾಡಗಿ ಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಮಿಕ್ಸಿ ಜಾರಿಗೆ ಇದನ್ನು ಸೇರಿಸಿ ತೆಂಗಿನಕಾಯಿ, ಉಪ್ಪು, ಬೆಲ್ಲ, ಹುಣಸೆಹಣ್ಣು ಸೇರಿಸಿ. ಚೆನ್ನಾಗಿ ರುಬ್ಬಿ.
ಬಳಿಕ ಚಟ್ನಿಗೆ ಸಾಸಿವೆ ಒಗ್ಗರಣೆ ಕೊಡಿ.
ನಂತರ ಚಟ್ನಿಯೊಂದಿಗೆ ಬಿಸಿ ಬಿಸಿಯಾದ ದೋಸೆಯನ್ನು ಸವಿಯಿರಿ.
ಸಿಹಿ ಕುಂಬಳಕಾಯಿ ಹಲ್ವಾ
ಬೇಕಾಗುವ ಸಾಮಗ್ರಿಗಳು
ಸಿಹಿ ಕುಂಬಳಕಾಯಿ ತುರಿ – 3 ಕಪ್
ತುಪ್ಪ – 2 ಚಮಚ
ಬಾದಾಮಿ ಗೋಡಂಬಿ ಚೂರುಗಳು – ಸ್ವಲ್ಪ
ಹಾಲು – 1 ಕಪ್
ಬೆಲ್ಲದ ಪುಡಿ – 1ಕಪ್
ಏಲಕ್ಕಿ ಪುಡಿ – ಚಿಟಿಕೆಯಷ್ಟು

ಮಾಡುವ ವಿಧಾನ
ಮೊದಲಿಗೆ ದಪ್ಪ ತಳದ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಬಾದಾಮಿ ಮತ್ತು ಗೋಡಂಬಿ ಚೂರುಗಳನ್ನು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಸಿಹಿ ಕುಂಬಳಕಾಯಿ ತುರಿಯನ್ನು ಸೇರಿಸಿ ಅದರ ಹಸಿವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಬಳಿಕ ಅದಕ್ಕೆ ಹಾಲು ಸೇರಿಸಿ ಮಿಶ್ರ ಮಾಡಿ. ನಂತರ ಕೈಯಾಡಿಸುತ್ತಾ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಬೆಲ್ಲದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಸಿಹಿ ಕುಂಬಳಕಾಯಿ ಮಿಶ್ರಣ ತಳ ಬಿಡುವವರಗೆ ಚೆನ್ನಾಗಿ ಬೆರೆಸಿ. ನಂತರ ಏಲಕ್ಕಿ ಪುಡಿ ಸೇರಿಸಿ. ಈಗ ಹುರಿದಿಟ್ಟುಕೊಂಡ ಗೋಡಂಬಿ, ಬಾದಾಮಿ ಸೇರಿಸಿ. ರುಚಿಯಾದ ಸಿಹಿ ಕುಂಬಳಕಾಯಿ ಹಲ್ವಾ ಸವಿಯಲು ಸಿದ್ಧವಾಗಿದೆ.
ಗೋಧಿ ಬಾದಾಮಿ ಲಡ್ಡು
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ಬಾದಾಮಿ ಪುಡಿ – 1 ಕಪ್
ಒಣ ಖರ್ಜೂರ ಪುಡಿ – 3/4 ಕಪ್
ಏಲಕ್ಕಿ ಪುಡಿ – 1 ಚಮಚ
ಓಟ್ಸ್ ಪುಡಿ – 1/2 ಕಪ್
ಕಮಲದ ಬೀಜದ ಪುಡಿ – 1/2 ಕಪ್
ತೆಂಗಿನಕಾಯಿ ಹುಡಿ – 2 ಚಮಚ

ಮಾಡುವ ವಿಧಾನ
ಮೊದಲಿಗೆ ತುಪ್ಪವನ್ನು ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಸೇರಿಸಿ ಮತ್ತು ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಹುರಿಯಿರಿ. ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಆಗುತ್ತಿದ್ದಂತೆ ಬಾದಾಮಿ ಪುಡಿ, ಒಣ ಖರ್ಜೂರ ಪುಡಿ, ಏಲಕ್ಕಿ ಪುಡಿ, ಓಟ್ಸ್ ಪುಡಿ, ಕಮಲದ ಬೀಜದ ಪುಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣವಾಗುವವರೆಗೆ ಬೆರೆಸಿ. ನಂತರ ಸ್ವಲ್ಪ ತಣ್ಣಗಾಗಿಸಿ. ಬಳಿಕ ಅಗತ್ಯವಿದ್ದರೆ ತುಪ್ಪವನ್ನು ಸೇರಿಸಿ ಚೆನ್ನಾಗಿ ನಾದಿ. ನಂತರ ಸಣ್ಣ ಸಣ್ಣ ಲಡ್ಡುಗಳನ್ನು ಮಾಡಿ ತೆಂಗಿನಕಾಯಿ ಹುಡಿ ಮೇಲೆ ಉರುಳಿಸಿ. ಈಗ ರುಚಿಯಾದ ಗೋಧಿ ಬಾದಾಮಿ ಲಡ್ಡು ಸವಿಯಲು ಸಿದ್ಧವಾಗಿದೆ.
ಅಕ್ಕಿಯ ಕೊಡುಬಾಲೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು 1 ಕಪ್
ನೀರು 2 ಕಪ್
ತೆಂಗಿನ ಎಣ್ಣೆ 2 ಟೀ ಚಮಚ
ಜೀರಿಗೆ 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ನೀರು, ಉಪ್ಪು, ತಾಜಾ ತೆಂಗಿನ ಎಣ್ಣೆ ಸೇರಿಸಿ. ಕುದಿಸಿ. ನಂತರ ಅಕ್ಕಿ ಹಿಟ್ಟು ಜೀರಾ ಸೇರಿಸಿ ಚೆನ್ನಾಗಿ ಬೆರೆಸಿ. 20 ನಿಮಿಷ ಬೇಯಿಸಿ.. ನಂತರ ಚೆನ್ನಾಗಿ ನಾದಿ ಹಿಟ್ಟನ್ನು ತಯಾರಿಸಿಕೊಳ್ಳಿ. ಚೆನ್ನಾಗಿ ಕಲಸಿ. ತಣ್ಣಗಾಗಲು ಬಿಡಿ. ನಂತರ ಆ ಹಿಟ್ಟಿನಿಂದ ಕೊಡುಬಾಲೆಗಳನ್ನು ತಯಾರಿಸಿ ಕೊಳ್ಳಿ. ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ರುಚಿಯಾದ ಅಕ್ಕಿಯ ಕೊಡುಬಾಲೆ ಸವಿಯಲು ಸಿದ್ಧವಾಗಿದೆ.








