ಬಳ್ಳಾರಿ: ಧೂಳಿನಿಂದ ತಮ್ಮ ಬಂಗಲೆ ರಕ್ಷಿಸಲು ಲಾರಿ ಬಸ್ಸುಗಳ ಸಂಚಾರ ಬಂದ್ ಮಾಡಿಸಿದ್ರಾ ಎಂಬ ಆರೋಪ ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಳೆದ ವರ್ಷ ಹೊಸಪೇಟೆಯಲ್ಲಿ ಸಚಿವ ಆನಂದ್‍ಸಿಂಗ್ ನಿರ್ಮಾಣ ಮಾಡಿದ ಬೃಹತ್ ಬಂಗಲೆಗೆ ಧೂಳು ಹಿಡಿಯಬಾರದೆಂದು ಭಾರಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆಯಂತೆ. ಬಂಗಲೆಯ ಮೇಲೆ ಧೂಳು ಆವರಿಸುತ್ತದೆ ಎಂದು ಬೈಪಾಸ್ ರಸ್ತೆಯಲ್ಲಿ ಭಾರಿ ವಾಹನಗಳ ನಿಷೇಧ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಲಾರಿ ಸೇರಿದಂತೆ ಇತರೆ ಸರಕು ಸಾಗಣೆ ವಾಹನಗಳ ಸಂಚಾರದ ಮೇಲೆ ಪೊಲೀಸರು ನಿರ್ಬಂಧಿಸಿದ್ದಾರೆ. ಭಾರಿ ವಾಹನಗಳ ಸಂಚಾರ ತಡೆಗೆ ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಬ್ಯಾರಿಕೇಡ್ ಬಳಿ ಪೊಲೀಸರು ಹಗಲು-ರಾತ್ರಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಆ ರಸ್ತೆಯಲ್ಲಿ ಸಂಚಾರ ನಿಬರ್ಂಧಿಸಿರುವ ಕಾರಣ ಭಾರಿ ವಾಹನಗಳು ಹೊಸಪೇಟೆ ನಗರದ ಮಧ್ಯದಿಂದ ಸಂಚಾರ ಮಾಡುತ್ತಿವೆ. ಈ ಹಿಂದೆ ಕೈಗಾರಿಕೆಗಳು, ಬಾಳೆ, ಭತ್ತ ಹಾಗೂ ಕಬ್ಬಿನ ಗದ್ದೆಗಳಿಂದ ಕೃಷಿ ಉತ್ಪನ್ನಗಳನ್ನು ಇದೇ ಮಾರ್ಗದಲ್ಲಿ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ರಸ್ತೆ ಬದಲಿ ಮಾಡಿರುವ ಪೊಲೀಸರ ಈ ಕ್ರಮಕ್ಕೆ ರೈತರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬೈಪಾಸ್ ರಸ್ತೆ ಇರುವುದೇ ಭಾರಿ ವಾಹನಗಳ ಸಂಚಾರಕ್ಕಾಗಿ. ಆದರೆ ಅದೇ ರಸ್ತೆಯಲ್ಲಿ ಭಾರಿ ವಾಹನಗಳಿಗೆ ನಿಬರ್ಂಧ ಹೇರಿದ್ದು ಅಧಿಕಾರ ದುರುಪಯೋಗದ ಪರಮಾವಧಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.