ಹಾಸನ : ಜೆಡಿಎಸ್ ಪಕ್ಷ ಹುಟ್ಟಿರೋದೆ ರೈತರಿಗೋಸ್ಕರ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಇಂದು ಹಾಸನದಲ್ಲಿ ಕರ್ನಾಟಕ ಭೂಸುಧಾರಣಾ ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಅಭಿವೃದ್ಧಿ ಕಾಯ್ದೆ ಸೇರಿದಂತೆ ರೈತರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿ ಹಿಂತೆಗೆದುಕೊಳ್ಳಲು ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಹೆಚ್ ಡಿಡಿ, ಈ ಪಕ್ಷ ಹುಟ್ಟಿರೋದೆ ರೈತರಿಗೋಸ್ಕರ. ಈ ವಯಸ್ಸಲ್ಲಿ ಕೊರೊನಾದಿಂದ ದೇವೇಗೌಡರಿಗೆ ಏನು ತೊಂದರೆಯಾಗುತ್ತೊ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಯಾವುದಕ್ಕೂ ಧೃತಿಗೆಡಲ್ಲ. ಸಾವು ಯಾವಾಗ ಬರುತ್ತೋ, ಯಾವಾಗ ಹೋಗುತ್ತೋ ಯಾರಿಗೂ ಗೊತ್ತಿಲ್ಲ. ಆದರೆ ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಸರ್ಕಾರಕ್ಕೆ ಚಾಟಿ ಬೀಸಿದ ಹೆಚ್ ಡಿಡಿ, ಲೂಟಿಕೋರರಿಗೆ ಅನುಕೂಲವಾಗುತ್ತೆ ಎಂದು ರೈತ ವಿರೋಧಿ ಕಾಯ್ದೆ ತರಲು ಮುಂದಾಗಿದ್ದಾರೆ. ಇದು ನನಗೆ ಗೊತ್ತಿದೆ. ಇದು ವ್ಯಕ್ತಿ ದ್ವೇಷದ ಹೋರಾಟವಲ್ಲ. ನಮ್ಮ ರೈತರನ್ನು ಉಳಿಸುವುದಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.








