ಸಂಜಯ್‌ ಗುಬ್ಬಿ ಪುಸ್ತಕ ʻಶಾಲೆಗೆ ಬಂದ ಚಿರತೆ ಮತ್ತು ಇತರ ಕತೆಗಳು’ ನೆನಪಿಸಿದ ಬಾಲ್ಯದಲ್ಲಿ ಕಾಡಿದ ಕಾಡು:

1 min read

ಸಾಹಿತ್ಯ ಸರ್ಕಲ್:

ಸಂಜಯ್‌ ಗುಬ್ಬಿ ಪುಸ್ತಕ ʻಶಾಲೆಗೆ ಬಂದ ಚಿರತೆ ಮತ್ತು ಇತರ ಕತೆಗಳು’ ನೆನಪಿಸಿದ ಬಾಲ್ಯದಲ್ಲಿ ಕಾಡಿದ ಕಾಡು:

ಕೃಪೆ – ಹಿಂದವಿ ಸ್ವರಾಜ್

ದಟ್ಟ ಕಾಡಿನ ನಡುವೆ ಇರುವ ಪುಟ್ಟ ಊರಿನಿಂದ ಬಂದ ನನಗೆ ಕಾಡೇ ಮರೆತು ಹೋಗುವಷ್ಟು ವರ್ಷಗಳಾದವು. ಇದೊಂದು ಪುಸ್ತಕ ಮತ್ತೆ ಬಾಲ್ಯಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ಆದರೆ ಬಾಲ್ಯಕಾಲದಲ್ಲಿ ನಮ್ಮೂರಿನ ಅನುಭವದಲ್ಲಿ ಕಾಡುಪ್ರಾಣಿಗಳೆಂದರೆ ಮನುಷ್ಯರು ಬೇಟೆಯಾಡಲು ಇರುವ ಸರಕುಗಳು ಎಂಬುದಷ್ಟೇ ನಮ್ಮ ಅರಿವಾಗಿತ್ತು. ಅದರಾಚೆಗೆ ಆ ಪ್ರಾಣಿಗಳಲ್ಲಿರುವ ಸೂಕ್ಷ್ಮ ಮನಸ್ಸು, ಅವುಗಳ ಆವಾಸಸ್ಥಾನದ ಮಿತಿಗಳು, ಬವಣೆಗಳು, ಅವುಗಳ ಬದುಕಿನ ಚಹರೆಗಳು, ಎಲ್ಲವನ್ನೂ ಸಂಜಯ್ ಗುಬ್ಬಿಯವರು ಕಥೆಗಳ ಮೂಲಕ ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಮಾನವನ ಕಿರುಹಸ್ತಕ್ಷೇಪ ಅವುಗಳ ಜೀವನವನ್ನೇ ಅಲ್ಲಾಡಿಸಿಬಿಡುವ ದುರಂತವನ್ನು ಸಾಕ್ಷಿಸಮೇತವಾಗಿ ವಿವರಿಸುತ್ತಾ ಹೋಗುತ್ತಾರೆ.

marjala manthana saakshatv

ನಡುರಾತ್ರಿಯಲಿ ನಮಗೆ ಕೆಲವೊಮ್ಮೆ ಭೂಮಿ ಕಂಪಿಸುವಂತೆ ಕೂಗುವ ದನಿಯೊಂದು ಕೇಳುತ್ತಿತ್ತು. ಭಯದಿಂದ ಎಚ್ಚರಗೊಂಡಾಗ ಅಪ್ಪ ಅದು ಹೆಬ್ಬುಲಿಯ ಕೂಗೆಂದೂ, ಅದು ನೆಲಕ್ಕೆ ಬಾಯಿಕೊಟ್ಟು ಕೂಗುವುದರಿಂದ ನೆಲ ಕಂಪಿಸುತ್ತದೆಯೆಂದೂ ಕತೆ ಹೇಳುತ್ತಿದ್ದರು. ಬಾಗಿಲೇ ಇಲ್ಲದ ನಮ್ಮ ಮನೆಯೊಳಗೆ ಬಂದರೆ, ಎಂದರೆ ಹುಲಿಗಿರ್ತಿಗೆ ಬಾಳೆಕೊನೆ ಪೂಜೆ ಕೊಟ್ಟಿದ್ದರಿಂದ ಅದು ಬರಲಾಗದು ಎಂದು ಧೈರ್ಯ ತುಂಬುತ್ತಿದ್ದರು. ಮನೆಯ ಹಟ್ಟಿಯಿಂದ ಕರುಗಳನ್ನು ಕದ್ದೊಯ್ದ ಹುಲಿಗಳ ಸಾಲು, ಸಾಲು ಕಥೆಗಳು ನಮ್ಮೂರಿನಲ್ಲಿದ್ದವು. ಮರದ ಮೇಲೆ ಅಟ್ಟೆ ಕಟ್ಟಿ ಅಥವಾ ಬಂದೂಕನ್ನು ಉಳ್ಳದಲ್ಲಿ ಕಟ್ಟಿ ಹುಲಿಹೊಡೆಯುವ ಕ್ರಮವಿತ್ತು. ಕೊನೆಕೊನೆಗೆ ಅವೆಲ್ಲವೂ ಅಪಾಯವೆನಿಸಿ ವಿಷವಿಟ್ಟು ಸಾಯಿಸುತ್ತಿದ್ದರು.

ಪಟ್ಟೆ ಹುಲಿಯೊಂದನ್ನು ಬಂದೂಕಿನಿಂದ ಸಾಯಿಸಿ ಎರಡೆರಡು ದಿನ ಮನೆಯೆದುರು ನಿಲ್ಲಿಸಿಟ್ಟ ನಮ್ಮೂರ ಶೂರರು ನೆನಪಾದರು. ನೂರಾರು ಸಲ ಅದರೆದುರು ನಿಂತರೂ ಅದು ಪಾಪವೆಂಬ ಕನಿಕರ ಬಾಲ್ಯದಲ್ಲಿ ಬಂದಿರಲೇ ಇಲ್ಲ. ನನ್ನ ಪ್ರೀತಿಯ ಹಂಡಕರುವನ್ನು ಹೊತ್ತೊಯ್ದ ಹುಲಿಗೆ ಹಾಗೇ ಆಗಬೇಕು ಅನಿಸಿಬಿಟ್ಟಿತ್ತು. ಆದರೆ ಇಲ್ಲಿ ಲೇಖಕರು ಇಬ್ಬನಿಯ ಹುಲಿ ಎದುರು ಬಂದ ಕಥೆಯನ್ನು ಹೇಳುವಾಗ ಯಾಕೋ ಕಾಟಿಯೊಂದು ಆ ಹುಲಿಗೆ ಸಿಗಬೇಕಿತ್ತು ಅನಿಸಿತಲ್ಲದೇ ಬಾಲ್ಯದಲ್ಲಿ ಕಂಡ ಹುಲಿಯ ಸಾವು ಎಂಥ ಅನ್ಯಾಯವೆನಿಸಿ ಕಣ್ಣಂಚು ಒದ್ದೆಯಾಯಿತು. ನಿಜಕ್ಕೂ ಹುಲಿ ಅದೆಷ್ಡು ಮುದ್ದಾದ ಪ್ರಾಣಿ!

ತಾನು ದಾರಿಗಡ್ಡ ನಿಂತು ಮರಿಯನ್ನು ರಸ್ತೆ ದಾಟಿಸುವ ಆನೆ, ಮೂರು ಮರಿಗಳನ್ನು ಪ್ರಯಾಸದಿಂದ ಬೆಳೆಸುವ ಚಿರತೆ, ಬಾಳೆಮಂಡಿಯೊಳಗೆ ನುಗ್ಗಿ ಸೆರೆವಾಸದ ಶಿಕ್ಷೆ ಪಡೆಯುವ ಚಿರತೆ, ಬೆಂಕಿ, ಪಿಂಕಿ. ಅವುಗಳ ಸಾವು, ಕಾರ್ಯ, ಕಾರಣ, ಹೂರಣ, ಹೀಗೆ ಅವುಗಳ ಲೋಕದಲ್ಲೂ ಬರೆದು ಮುಗಿಸಲಾಗದಷ್ಟು ಕಥೆಗಳಿವೆ. ಚಿರತೆ ಶಾಲೆಗೆ ಬರುವುದು ಅಕ್ಷರ ಕಲಿಯಲೇನೂ ಅಲ್ಲ! ಆದರೆ ನಮ್ಮನ್ನು ಶಿಕ್ಷಿತರಾಗಿಸಲಿಕ್ಕಂತೂ ಹೌದು.

ವೀಕ್ಷಕ ಕ್ಯಾಮರಾಗಳ ಮೇಲೆ ವಿವಿಧ ಪ್ರಾಣಿಗಳು ಮಾಡುವ ಪ್ರಯೋಗಗಳು, ಪ್ರಹಾರಗಳ ಕಥೆಯಂತೂ ಬಿದ್ದೂ, ಬಿದ್ದು ನಗುವಷ್ಟು ಚೇತೋಹಾರಿಯಾಗಿವೆ. ಲದ್ದಿ ತಿಂದು ಬದುಕುವ ಪ್ರಾಣಿಗಳೂ ಇವೆ! ನಮ್ಮೂರ ಕಾಡಿನಲ್ಲಿದ್ದ ಬಸರಿಮರ ಇಷ್ಟೊಂದು ಜೋರಿದೆಯೆಂದು ಇಲ್ಲಿ ಓದಿಯೇ ಅರಿವಾದದ್ದು. ಕಾಡೆಂದರೆ ಟಿ.ವಿ.ಯಲ್ಲಿ ಬರುವ ವೈಲ್ಡ್ ಲೈಫ್ ಚಾನೆಲ್ ಮತ್ತು ಅದರಲ್ಲಿ ಸಾಹಸಿಗರು ನಡೆಸುವ ಕಸರತ್ತುಗಳು ಎಂದಷ್ಟೇ ತಿಳಿದಿರುವ ನಮ್ಮ ಮಕ್ಕಳ ಕೈಗೆ ಅವಶ್ಯವಾಗಿ ಈ ಪುಸ್ತಕವನ್ನು ಹಿಡಿಸಬೇಕಾಗಿದೆ. ನವಕರ್ನಾಟಕ ಪುಸ್ತಕ ಪ್ರಕಟಿಸಿ ಪರಿಸರ ವಿಜ್ಞಾನಕ್ಕೆ ಕಾಣಿಕೆ ನೀಡಿದೆ. 

“ಆ ಚಿರತೆ ಕಣ್ಣು ಎಷ್ಟು ಸುಂದರವಾಗಿತ್ತು ಗೊತ್ತಾ?” ಕಚ್ಚಿದ ಚಿರತೆ ಬಗ್ಗೆ ಸಂಜಯ್ ಹೇಳುತ್ತಿದ್ದರೆ ನಾನು ಅರ್ಥವಾಗದೆ ನಗುತ್ತಿದ್ದೆ. “ಕ್ರೂರ ಮೃಗಗಳು” ಅನ್ನುತ್ತೇವಲ್ಲ ನಾವು? ಇಷ್ಟು ವರ್ಷಗಳಲ್ಲಿ ಅವರು ಒಂದು ದಿನವೂ ಆ ಪದಬಳಕೆ ಮಾಡಿಲ್ಲ. ಈ ಪುಸ್ತಕದ ಕೆಲ ಅಧ್ಯಾಯಗಳನ್ನು ಓದಿದಾಗ “ಯಾಕೊಳ್ಳೆ ಕಾಡ್ ಪ್ರಾಣಿ ಆಡ್ದಂಗಾಡ್ತೀಯಾ.. ಅಂತೀವಲ್ಲಾ ನಾವು? ಪ್ರಾಣಿಗಳ ಲೋಕ ” ಯಾಕೊಳ್ಳೆ ಮನ್ಷ ಆಡ್ದಂಗಾಡ್ತೀಯಾ?” ಅಂತ ಮಾತಾಡ್ಕೋಬಹುದಾ ಅಂತ ಗುಮಾನಿ ಬಂತು. ಅವುಗಳ ಒಳಗೂ ಭಾವಲೋಕವೊಂದಿದೆ. ಮನೆ, ಸಂಸಾರ ಅಂತೆಲ್ಲ ತಾಪತ್ರಯಗಳೂ ಇವೆ. 

                           

‘ಇವತ್ತು ಐದು ಮೀಟರ್ ಅಂತರದಲ್ಲಿ ಮೂರು ಹುಲಿಗಳನ್ನು ನೋಡಿದೆ.  ಒಂದಂತೂ ಪುಟ್ಟಮರಿ. ಎಂತಹ ಸುಂದರಲೋಕ ಇದು!’ ಅನ್ನುತ್ತಾರವರು. ನಾನು ಬೆಚ್ಚುತ್ತೇನೆ. ಜೀವ ಬಾಯಿಗೆ ಬಂದಿರೋದು ನಂಗಾಗಿದ್ದರೆ..  ‘ನೀವ್ ಸ್ವಲ್ಪ ಸರಿ ಇಲ್ಲ ಸಂಜಯ್’ ಅನ್ನುತ್ತೇನೆ. ಅವರು ಎಂದಿನ ಸಂಯಮದ ದನಿಯಲ್ಲಿ ‘ಹೌದು’ ಅನ್ನುತ್ತಾರೆ. ಸುಮಾರು ಒಂದೂವರೆ ದಶಕಗಳಿಂದ ನೋಡುತ್ತಿದ್ದೇನೆ. ಈ ಪಾರ್ಟಿ ಬದಲಾಗಿಲ್ಲ. ಆಗೋದೂ ಇಲ್ಲ. ಪಕ್ಕಾ.  ಅವರನ್ನು ಸುಮ್ಮನೇ ಛೇಡಿಸಿದರೂ‌ ನಂತರ ಯೋಚಿಸುತ್ತೇನೆ. ನಿಜಕ್ಕೂ ಯಾರು ಸರಿ‌ ಇಲ್ಲ? ವನ್ಯಜೀವಿಗಳನ್ನು ಅನ್ಯಜೀವಿಗಳು ಅಂತ ದೂರೀಕರಿಸುವ ನಾವೋ ಸಹಜೀವಿಗಳು ಅಂತ ಒಪ್ಪಿಕೊಳ್ಳುವ ಅವರೋ? ಈ ಪುಸ್ತಕ ಓದಿದರೆ ನಮಗೂ ಅವುಗಳ ಲೋಕ ಎಷ್ಟು ಸುಂದರ ಅನಿಸುತ್ತದೆ. 

ಶಾಲೆಯಲ್ಲಿ ಚಿರತೆ ಕಚ್ಚಿದ ನಂತರ ಸಾಕಷ್ಟು ದೈಹಿಕ ತೊಂದರೆ ಅನುಭವಿಸುತ್ತಿದ್ದರೂ ಅವರು ಅದರ ಬಗ್ಗೆ ಒಂದು ದಿನವೂ ದೂರಿದ್ದು, ಬೇಸರಿಸಿಕೊಂಡದ್ದು ನೋಡಿಲ್ಲ ನಾನು. ದೈಹಿಕ ಇತಿಮಿತಿಗಳ‌ ನಡುವೆಯೂ ಪ್ರಾಣಿಗಳಿಗಾಗಿ ಶಕ್ತಿಮೀರಿ ಕೆಲಸ ಮಾಡುತ್ತಾರೆ. ಗ್ರೀನ್ ಆಸ್ಕರ್ ಎಂದೇ ಹೇಳುವ ವೈಟ್ಲೀ ಪ್ರಶಸ್ತಿ ಪಡೆದ ಸಂಜಯ್, ಬಿಡುವಿಲ್ಲದ ಕಾಡಿನ ಕೆಲಸಗಳ ನಡುವೆಯೂ ವನ್ಯಜೀವಿಗಳ ವಿಷಯವನ್ನು ಕನ್ನಡದಲ್ಲಿ ಬರೆಯಬೇಕು ಅಂತ ಬೆಳಗಿನ ಜಾವ ಎದ್ದು ಬರೆಯುತ್ತಾರೆ. ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕತೆಗಳು’ ಪುಸ್ತಕ ನವಕರ್ನಾಟಕದ ಆನ್ಲೈನ್ ನಲ್ಲೂ ಲಭ್ಯ. ನಿಮ್ಮ ಮಕ್ಕಳಿಗೆ ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಮಹತ್ವ ತಿಳಿಸಿಲು ಈ ಪುಸ್ತಕ ಕೊಂಡು ಓದಲು ಕೊಡಿ. 

-ಸುಧಾ ಆಡುಕಳ, ಹವ್ಯಾಸಿ ಬರಹಗಾರ್ತಿ 

ಮತ್ತು 

ಕುಸುಮಬಾಲೆ ಆಯರಳ್ಳಿ, ಅಂಕಣಕಾರ್ತಿ   

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd