ನಮ್ಮನ್ನು ಕಾಪಾಡುವ ಕಾಡನ್ನು ಸಮುದ್ರಕ್ಕೆಸಯಲು ಹೊರಟಿದೆ ಅವಿವೇಕಿ ಪ್ರಭುತ್ವ

1 min read

ಕೃಪೆ – ಹಿಂದವಿ ಸ್ವರಾಜ್

ನಮ್ಮನ್ನು ಕಾಪಾಡುವ ಕಾಡನ್ನು ಸಮುದ್ರಕ್ಕೆಸಯಲು ಹೊರಟಿದೆ ಅವಿವೇಕಿ ಪ್ರಭುತ್ವ:

“ಅಳಿದುಳಿದಿರುವ ಕಾಡನ್ನು ಉಳಿಸಿಕೊಳ್ಳದೇ ಹೋದರೆ ನಾಳೆಯ ನಮ್ಮ ಮುಂದಿನ ಪೀಳಿಗೆಗೆ ನಾವು ಬದುಕನ್ನಲ್ಲ ಮಸಣವನ್ನು ತೆರೆದಿಟ್ಟು ಹೋಗಬೇಕಾಗುತ್ತದೆ ಎಚ್ಚರ!”

ನಮ್ಮನ್ನು ಆಳುತ್ತಿರುವ ಮೂಢಮತಿಗಳಿಗೆ ಬುದ್ದಿ ಬರುವ ಲಕ್ಷಣ ಕಾಣುತ್ತಿಲ್ಲ. ಅವಿವೇಕಿ ರಾಜಕಾರಣಿಗಳು ದುಡ್ಡು ಮಾಡಲು ವಕ್ರದೃಷ್ಟಿ ಬೀರಿರುವುದು ನಮ್ಮ ಬದುಕಿನ ಅವಿಭಾಜ್ಯವೇ ಆಗಿರುವ ಪಶ್ಚಿಮ ಘಟ್ಟದ ಒಡಲಿನ ಮೇಲೆ. ನಮ್ಮ ಪಶ್ಚಿಮ ಘಟ್ಟಗಳೆಂಬ ಅಮೂಲ್ಯ ಅರಣ್ಯಪ್ರದೇಶವನ್ನು ಅಭಿವೃದ್ಧಿಯ ಹೆಸರಿನಲ್ಲಿ ಒಂದಿಲ್ಲೊಂದು ವಿನಾಶಕಾರಿ ಯೋಜನೆಗಳ ಮೂಲಕ ನಾಶ ಮಾಡಲಾಗುತ್ತಿದೆ. ಇದರ ಭವಿಷ್ಯತ್‌ ಪರಿಣಾಮಗಳ ಮುನ್ಸೂಚನೆ ಈಗಾಗಲೇ ಕಾಣಿಸುತ್ತಿದೆ. ಗಮನಿಸಿ ನೋಡಿ ೨೦೧೭-೧೮ರಲ್ಲಿ ಮುಂಗಾರು ವೈಫಲ್ಯವಾಗಿತ್ತು, ಆದರೆ ಆಗಸ್ಟ್‌ ಅಂತ್ಯದಲ್ಲಿ ಅಕಾಲಿಕ ಮಳೆ ಸುರಿದು ಪಕ್ಕದ ಕೇರಳ ನಮ್ಮದೇ ಕೊಡಗು ಜಲಪ್ರವಾಹಕ್ಕೆ ತುತ್ತಾಗಿತ್ತು. ೨೦೧೮-೧೯ರಲ್ಲಿ ಸೆಪ್ಟೆಂಬರ್‌ ಮೊದಲ ಮತ್ತು ಎರಡನೇ ವಾರದಲ್ಲಿ ಕುಂಭದ್ರೋಣ ಮಳೆಗೆ ರಾಜ್ಯದ ಹತ್ತು ಜಿಲ್ಲೆಗಳು ನಲುಗಿದ್ದವು. ಗಂಗಾವಳಿ ಪ್ರವಾಹ ಉತ್ತರ ಕನ್ನಡ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ೨೦೧೯-೨೦ರಲ್ಲೂ ಮತ್ತೆ ಮುಂಗಾರು ವೈಫಲ್ಯ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಅಕಾಲಿಕ ವರ್ಷಧಾರೆ-ಪ್ರವಾಹ ಉತ್ತರ ಕರ್ನಾಟಕ ತತ್ತರಿಸಿತ್ತು. ೨೦೨೦-೨೧ರಲ್ಲಿ ಈಗ ನವೆಂಬರ್‌ ಅಂತ್ಯವಾದರೂ ಮಳೆಗಾಲ ನಿಂತಿಲ್ಲ. ಹೀಗೆ ಋತುಗಳೇ ಸ್ಕಿಪ್‌ ಆಗುತ್ತಿರುವುದು ಖಂಡಿತಾ ಒಳ್ಳೆಯದಕ್ಕಲ್ಲ.nature - marjala manthana - saakshatv

ಈ ಬಾರಿ ಆಂಧ್ರದ ಕಡಪ, ತಿರುಪತಿಯ ಮರಣಸದೃಶ್ಯ ಮಹಾಪ್ರವಾಹ ನಮಗೆ ಏನೋ ಸೂಚನೆ ನೀಡುತ್ತಿದೆ. ಆದರೆ ನಮ್ಮ ಮೂರ್ಖ ಜನಪ್ರತಿನಿಧಿಗಳಿಗೆ ಸಮೃದ್ಧ ಕಾಡೆಂಬ ಖಜಾನೆಯನ್ನು ಕೊಳ್ಳೆ ಹೊಡೆಯುವ ಒಂದಂಶದ ಕಾರ್ಯಕ್ರಮದ ಭರಾಟೆಯಲ್ಲಿ ಪ್ರಕೃತಿಯ ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆನ್ನಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕದ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬಿ ಕೆ ಸಿಂಗ್ ಬರೆದಿರುವ ಲೇಖನವೊಂದು ನಿಜಕ್ಕೂ ನಮ್ಮೆಲ್ಲರನ್ನು ಎಚ್ಚರಿಸುವಂತಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯನಾಶ ನಿಲ್ಲದಿದ್ದರೆ, ಕರ್ನಾಟಕ, ಗೋವಾ ಮತ್ತು ಕೇರಳದ ಕರಾವಳಿ ಜಿಲ್ಲೆಗಳು ಮುಂದೊಂದು ದಿನ ಅರಬ್ಬಿ ಸಮುದ್ರದ ಪಾಲಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಬಿ.ಕೆ ಸಿಂಗ್. ಇಲ್ಲಿಯವರೆಗೆ, ನಮ್ಮ ಅನೇಕ ಸೋ ಕಾಲ್ಡ್‌ ಅಭಿವೃದ್ಧಿ ಯೋಜನೆಗಳಿಗಾಗಿ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನಾಶವಾದ ಪ್ರಾಚೀನ ಅಮೂಲ್ಯ ಅರಣ್ಯ ಬರೋಬ್ಬರಿ 27,280 ಹೆಕ್ಟೇರ್. ಸದ್ಯ ರೈಲು ಸಂಪರ್ಕ ಮತ್ತು ರಸ್ತೆ ಯೋಜನೆಗಳ ಹೆಸರಿನಲ್ಲಿ ಮತ್ತೆ ಇಷ್ಟೇ ಪ್ರಮಾಣದ ಕಾಡು ನಾಶವಾಗುವ ಅಪಾಯವಿದೆ. ಇದು ಹೀಗೆಯೇ ಮುಂದುವರೆದರೆ ನಮ್ಮ ಮಕ್ಕಳ ಬದುಕು ಖಂಡಿತಾ ಅಸಹನೀಯಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.forest - marjala manthana saakshatv

ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ಒಪ್ಪಂದ ಮಾಡಿಕೊಂಡ 100ಕ್ಕೂ ಹೆಚ್ಚು ದೇಶಗಳು 2030ರ ಹೊತ್ತಿಗೆ ಸಂಪೂರ್ಣ ಅರಣ್ಯನಾಶ ನಿಲ್ಲಿಸಲು ಪ್ರತಿಜ್ಞೆ ಮಾಡಿವೆ. ಈ ಹಿಂದೆಯೂ ಇಂತಹ ಭರವಸೆಗಳನ್ನು ನೀಡಿದ್ದು ಮತ್ತು ಮುರಿದಿದ್ದನ್ನು ತಜ್ಞರು ಅಂಕಿ ಅಂಶ ಸಹಿತ ಮಂಡಿಸಿದ್ದಾರೆ. ಆದರೆ ಯುನೈಟೆಡ್‌ ಕಿಂಗ್‌ಡಮ್‌, ಬ್ರೆಜಿಲ್, ಚೈನಾ, ಕೊಲಂಬಿಯಾ, ಕಾಂಗೋ, ಇಂಡೋನೇಷಿಯಾ, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದ 85%ಕ್ಕಿಂತ ಹೆಚ್ಚು ಕಾಡುಗಳನ್ನು ಪ್ರತಿನಿಧಿಸುವ ರಾಷ್ಟ್ರಗಳ ನಾಯಕರು ಅರಣ್ಯ ಉಳಿಸಿಕೊಳ್ಳುವ ಮಾತಾಡುತ್ತಿದ್ದಾರೆ. ದರದೃಷ್ಟ ನೋಡಿ ಅತಿ ಹೆಚ್ಚು ಕಾಡು ಹೊಂದಿರುವ ಅತಿ ಉದ್ದನೆಯ ಪಶ್ಚಿಮ ಘಟ್ಟವೆಂಬ ಹಸಿರ ಗೋಡೆ ಹೊಂದಿರುವ ನಮ್ಮ ಭಾರತ ಇನ್ನೂ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಇದರರ್ಥ ಇಲ್ಲಿ ಅರಣ್ಯನಾಶ ಅನಿಯಂತ್ರಿವಾಗಿ ಮುಂದುವರೆಯುತ್ತದೆ ಮತ್ತು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ಭೂಮಿಯನ್ನು ಕೊಳ್ಳೆಹೊಡೆಯುತ್ತೇವೆ ಎನ್ನುವ ಸಂಕೇತವೇ?marjala manthana - saakshatv

ಯುನೆಸ್ಕೋ, ಸ್ವಿಟ್ಜರ್ಲೆಂಡ್ ಮೂಲದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಸಹಯೋಗದೊಂದಿಗೆ 257 ಅರಣ್ಯ ಪ್ರದೇಶಗಳಲ್ಲಿ ಜಿಹೆಚ್‌ಜಿ (GHG) ಹೊರಸೂಸುವಿಕೆ ಅಧ್ಯಯನ ಮಾಡಿದೆ. ಇವು ಇಂಗಾಲದ ಪ್ರತ್ಯೇಕೀಕರಣಕ್ಕಾಗಿ ನೀರು, ಗಾಳಿ ಮತ್ತು ಸ್ಥಳದಂತಹ ಪರಿಸರ ಸೇವೆಗಳನ್ನು ಒದಗಿಸುವ ಪ್ರಮುಖ ಅರಣ್ಯಗಳಾಗಿವೆ. ಸಾಮಾನ್ಯವಾಗಿ ಕಾಡುಗಳನ್ನು ಇಂಗಾಲ ಹೀರಿಕೊಳ್ಳುವ ಜಾಗ ಎಂದು ತಿಳಿಯಲಾಗುತ್ತದೆ; ಆದರೆ ಇವುಗಳಲ್ಲಿ 10 ಅರಣ್ಯ ಪ್ರದೇಶಗಳು ನಿವ್ವಳ ಇಂಗಾಲದ ಹೊರಸೂಸುವಿಕೆ ಪ್ರದೇಶಗಳಾದರೆ, 80 ಕಾಡುಗಳು ತಟಸ್ಥ, ಇನ್ನುಳಿದ 167 ಅರಣ್ಯ ಪ್ರದೇಶಗಳು ಕಾರ್ಬನ್‌ ಡೈ ಆಕ್ಸೈಡ್ (CO2) ಹೀರಿಕೊಳ್ಳುವ ಅರಣ್ಯತಾಣಗಳಾಗಿವೆ. ವರದಿಯ ಇನ್ನೊಂದು ಮುಖ್ಯ ಅಂಶವೆಂದರೆ, ಕಾಡಿನ ಬೆಂಕಿ, ಕೃಷಿಗಾಗಿ ಅರಣ್ಯ ನಾಶ, ಜಾನುವಾರು ಮೇಯಿಸುವಿಕೆ, ಕಲ್ಲುಗಣಿಗಾರಿಕೆ ಮತ್ತು ಗಣಿಗಾರಿಕೆಯ ಕಾರಣಗಳಿಗೆ ಇಂಗಾಲದ ಹೊರಸೂಸುವಿಕೆ ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ. ಅರಣ್ಯನಾಶದಿಂದ ಭೂಗ್ರಹದ ತಾಪಮಾನ ಹೆಚ್ಚಾಗುತ್ತದೆ, ಬರ ಸಂಭವಿಸುತ್ತದೆ, ಪ್ರವಾಹ ಏರ್ಪಡುತ್ತದೆ, ಕಾಳ್ಗಿಚ್ಚಿಗೂ ಅರಣ್ಯ ನಾಶವೇ ಕಾರಣ. ಇದೆಲ್ಲದರ ಒಟ್ಟು ಔಟ್‌ಪುಟ್‌ ವಾತಾವರಣದಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ ಹೆಚ್ಚಾಗಿ ಬಿಡುಗಡೆ ಹೊಂದುತ್ತದೆ. ಇದೇ ಹಸಿರುಮನೆ ಪರಿಣಾಮ, ಇದೇ ಗ್ಲೋಬಲ್‌ ವಾರ್ಮಿಂಗ್. ಇಷ್ಟು ಕಾಮನ್‌ಸೆನ್ಸ್‌ ನಮ್ಮ ಶಾಲೆ ಕಲಿಯುವ ಬಾಲಕನಿಗೆ ಆದರೆ ಈ ಕಾಮನ್‌ ಸೆನ್ಸ್‌ ನಮ್ಮನ್ನು ಆಳುವ ಮೂರ್ಖ ರಾಜಕಾರಣಿಗಳಿಗಿಲ್ಲ.nature - saakshatv

ಇದಕ್ಕೊಂದು ತಾಜಾ ಉದಾಹರಣೆ ಸೈಬೀರಿಯಾ ಮತ್ತು ಕ್ಯಾಲಿಫೋರ್ನಿಯಾದ ಕಾಡುಗಳಲ್ಲಿ ಇತ್ತೀಚೆಗೆ ಕಂಡುಬಂದ ವಿನಾಶಕಾರಿ ಕಾಡಿನ ಬೆಂಕಿ. 1.5 ಮಿಲಿಯನ್ ಹೆಕ್ಟೇರ್ ಸೈಬೀರಿಯಾ ಕಾಡುಗಳು ಬೆಂಕಿಗೆ ಆಹುತಿಯಾಯಿತು. 2 ಮಿಲಿಯನ್ ಹೆಕ್ಟೇರ್ ಕ್ಯಾಲಿಫೋರ್ನಿಯಾ ಕಾಡುಗಳು ಸುಟ್ಟು ಭಸ್ಮವಾಯಿತು. ಟರ್ಕಿ, ಗ್ರೀಸ್, ಬ್ರೆಜಿಲ್ ಇತ್ಯಾದಿಗಳಲ್ಲಿ ಹಲವಾರು ಮಿಲಿಯನ್ ಹೆಕ್ಟೆರ್‌ ಕಾಡು ಅಗ್ನಿಯ ಕೆನ್ನಾಲಿಗೆ ಆಹುತಿಯಾಯಿತು. ಇದರ ಪರಿಣಾಮ ವಾರ್ಷಿಕ 500 ಮೆಗಾ ಟನ್ ಕಾರ್ಬನ್‌ ಡೈ ಆಕ್ಸೈಡ್‌ ವಾತಾವರಣ ಸೇರಿತು. ಇದಕ್ಕೆ ಏನು ಕಾರಣ? ಯಾರು ಹೊಣೆ? ಜಗತ್ತಿನ ಅತ್ಯಂತ ಸಿರಿವಂತ ರಾಷ್ಟ್ರಗಳೆಂದು ಕರೆಸಿಕೊಂಡವು, ಅಷ್ಟೆಲ್ಲಾ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿದ್ದರೂ ಹಲವು ತಿಂಗಳು ಉರಿದ ಕಾಡಿನ ಬೆಂಕಿ ಆರಿಸಲು ಸಾಧ್ಯವಾಗಲಿಲ್ಲ. ಅಮೇಜಾನ್‌ ಮಳೆಕಾಡು ಸೇರಿದಂತೆ ಆಸ್ಟ್ರೇಲಿಯಾ, ಸೈಬೀರಿಯಾ, ಕ್ಯಾಲಿಫೋರ್ನಿಯಾ ಯಾವುದೇ ಕಾಡ್ಗಿಚ್ಚಿನ ವರದಿ ಗಮನಿಸಿ ಈ ಶ್ರೀಮಂತ ರಾಷ್ಟ್ರಗಳು ಅದೆಷ್ಟು ಅಸಹಾಯಕವಾಗಿ ನಿಂತಿದ್ದವು. ಅವುಗಳ ಕಥೆಯೇ ಹೀಗಾದರೇ ನಮ್ಮಂತಹ ಮುಂದುವರೆಯುತ್ತಿರುವ ರಾಷ್ಟ್ರಗಳ ಕಥೆಯೇನು? ಕಳೆದ ವರ್ಷ ಬಂಡೀಪುರ-ನಾಗರಹೊಳೆ ಮುಂತಾದ ಕಡೆ ಹೊತ್ತಿಕೊಂಡ ಅರಣ್ಯಬೆಂಕಿಯ ಘಟನೆ ನೆನಪಿಸಿಕೊಳ್ಳಿ.

ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಈಗಾಗಲೇ ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳು ಪೈಪ್‌ಲೈನ್‌ನಲ್ಲಿವೆ. ನಾವು ಈಗಾಗಲೇ 27,280 ಹೆಕ್ಟೇರ್ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಕಳೆದುಕೊಂಡಿದ್ದೇವೆ. ಒಂದಷ್ಟು ಅಂಕಿ ಅಂಶಗಳ ಸಹಿತ ಹೇಳುವುದಾದರೇ, ಶರಾವತಿ-ಲಿಂಗನಮಕ್ಕಿ ಮುಳುಗಡೆಯಿಂದ 14,000 ಹೆಕ್ಟೇರ್ ಅರಣ್ಯ ನಾಶ, ವಾರಾಹಿ ಯೋಜನೆಯ ಕಾರಣ 6800 ಹೆಕ್ಟೇರ್ ಅರಣ್ಯ, ತಲಕಳಲೆ ಜಲಾಶಯ ಯೋಜನೆ ನುಂಗಿದ್ದು 1000 ಹೆಕ್ಟೇರ್ ಕಾಡು, ಚಕ್ರ ಅಣೆಕಟ್ಟು ಯೋಜನೆಯಲ್ಲಿ ಮುಳುಗಿದ್ದು 1880 ಹೆಕ್ಟೇರ್ ಕಾಡು, KPCL ಟೌನ್‌ಶಿಪ್ ದೋಚಿದ್ದು 2000 ಹೆಕ್ಟೇರ್ ಅರಣ್ಯ, ಶರಾವತಿ ಟೈಲ್ ರೇಸ್ ಯೋಜನೆಯಿಂದ 800 ಹೆಕ್ಟೇರ್ ಅರಣ್ಯ, KPTCL ಯೋಜನೆಗಳಿಂದ 800 ಹೆಕ್ಟೇರ್ ಕಾಡು ಸರ್ವನಾಶವಾಗಿದೆ. ಇದರ ಜೊತೆ ಈ ಯೋಜನೆಗಳಿಂದ ಸ್ಥಳಾಂತರಿಸಲ್ಪಟ್ಟವರ ಪುನರ್ವಸತಿಗಾಗಿ ಹಲವಾರು ಸಾವಿರ ಹೆಕ್ಟೇರ್ ಕಾಡುಗಳನ್ನು ಕಳೆದುಕೊಳ್ಳಲಾಗಿದೆ.

ಇಷ್ಟಾಯಿತಲ್ಲ, ಈಗ ಮತ್ತಷ್ಟು ಯೋಜನೆಗಳು ಅನುಷ್ಠಾನಕ್ಕೆ ಬಾಕಿ ಇವೆ. ಅದರತ್ತ ಗಮನ ಕೇಂದ್ರೀಕರಿಸುವುದಾದರೇ, ಕ್ಯಾಸಲ್ ರಾಕ್ ಮೂಲಕ ಲೋಂದಾ-ಮಡಗಾಂವ್ ರೈಲು ಮಾರ್ಗದ ಡಬ್ಲಿಂಗ್ ಅನುಮೋದನೆಯ ಅಂತಿಮ ಹಂತದಲ್ಲಿದೆ. ಬೆಳಗಾವಿ-ಪಂಜಿಂ ರಸ್ತೆ ಅಗಲೀಕರಣಕ್ಕೆ ಆದೇಶ ನೀಡಲಾಗಿದ್ದು, ಅನುಷ್ಠಾನ ಪ್ರಗತಿಯಲ್ಲಿದೆ. ಬೇಲೇಕೇರಿ ಬಂದರಿಗೆ ಸಂಪರ್ಕ ಕಲ್ಪಿಸುವ ಶಿರಸಿ-ಕುಮಟಾ ರಸ್ತೆ ಅಗಲೀಕರಣದ ಪ್ರಸ್ತಾವನೆ ಹಂತದಲ್ಲಿದೆ. ಖಾನಾಪುರ-ಅಳ್ನಾವರ-ಯಲ್ಲಾಪುರ-ಶಿರಸಿ-ತಾಳಗುಪ್ಪಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವುದು ರಾಜಕಾರಣಿಗಳ ಕನಸಿನ ಯೋಜನೆಯಾಗಿದೆ. ಕೈಗಾದಿಂದ ಗೋವಾಕ್ಕೆ ಪ್ರಸರಣ ಮಾರ್ಗಕ್ಕಾಗಿ 177-ಹೆಕ್ಟೇರ್ ಕಾಡುಗಳನ್ನು ತಿರುಗಿಸುವ ಪ್ರಸ್ತಾಪವನ್ನು ಪರಿಸರ ಮತ್ತು ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕಾಣಬಹುದು. ಶರಾವತಿ ಪಂಪ್ಡ್ ಶೇಖರಣಾ ಯೋಜನೆಗಾಗಿ 200 ಹೆಕ್ಟೇರ್ ಸಮೃದ್ಧ ನಿತ್ಯಹರಿದ್ವರ್ಣ ಕಾಡುಗಳನ್ನು ತಿರುಗಿಸುವ ಪ್ರಸ್ತಾವನೆಯನ್ನು ಇತ್ತೀಚೆಗೆ ರಾಜ್ಯ ವನ್ಯಜೀವಿ ಮಂಡಳಿಯು ಅನುಮೋದಿಸಿತ್ತು. ಈ ಯೋಜನೆಗಳು ಖಂಡಿತಾ ಅಸಮರ್ಪಕ; ಸಮಾಜಕ್ಕೆ ಲಾಭಕ್ಕಿಂತ ಹೆಚ್ಚು ಹಾನಿಯೇ ಹೆಚ್ಚು.nature - saakshatv

ಇನ್ನು ರೈಲ್ವೇ ಮಾರ್ಗದ ಯೋಜನೆಗಳ ವಿಚಾರಕ್ಕೆ ಬರುವುದಾದರೇ, ತಾಳಗುಪ್ಪ-ಸಿರಸಿ ಮತ್ತು ಸಿರ್ಸಿ-ಹಾವೇರಿ ನಡುವೆ ಸಂಪರ್ಕ ಒದಗಿಸಲು ಪಶ್ಚಿಮ ಘಟ್ಟಗಳ ಒಳಭಾಗದಲ್ಲಿ ಮತ್ತೊಂದು ರೈಲು ಯೋಜನೆಯನ್ನು ಸಮೀಕ್ಷೆ ಮಾಡಲಾಗುತ್ತಿದೆ. ಇದರಿಂದ ಬೇಡ್ತಿ, ಅಘನಾಶಿನಿಯಂತಹ ಪ್ರಮುಖ ನದಿಗಳ ಜಲಾನಯನದ ಮೇಲೆ ಖಂಡಿತಾ ಪರಿಣಾಮ ಬೀರುವ ಸಾಧ್ಯತೆಯಿದೆ. ಹೆಲಿಕಾಪ್ಟರ್ ಮೂಲಕ ತಲಚೆರಿ-ವಯನಾಡು-ಮೈಸೂರು ರೈಲು ಸಂಪರ್ಕದ ವೈಮಾನಿಕ ಸಮೀಕ್ಷೆ ಮಾಡಲಾಗಿದೆ. ನೆಲದಿಂದ 500 ಮೀಟರ್ ಆಳದ ಕೆಳಗಿನ ಉಪ ಮೇಲ್ಮೈ ಯೋಜನೆಯಂತೆ ಇದು. ತಲಚೆರಿ-ಮೈಸೂರು ರೈಲು ಯೋಜನೆ ಕರ್ನಾಟಕದ ಬಂಡೀಪುರ ಮತ್ತು ಕೇರಳದ ವಯನಾಡಿನ ಎಲ್ಲಾ ಪ್ರಮುಖ ಹುಲಿಗಳ ಆವಾಸಸ್ಥಾನವನ್ನು ನಾಶ ಮಾಡುತ್ತದೆ. ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಸುಮಾರು ಎರಡು ದಶಕಗಳಿಂದ ಪೈಪ್‌ಲೈನ್‌ನಲ್ಲಿರುವ ಮತ್ತೊಂದು ವಿವಾದಾತ್ಮಕ ಯೋಜನೆ. 2008ರಲ್ಲಿ ಇದರ ಪ್ರಸ್ತಾಪ ಬಂದಾಗ, ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಅರಣ್ಯ) ಅಭಿಜಿತ್ ದಾಸ್‌ಗುಪ್ತ ಎಲ್ಲಾ ಅಂಶಗಳನ್ನು ವಿವರವಾಗಿ ಪರಿಶೀಲಿಸಿ ಯೋಜನೆಯನ್ನು ತಿರಸ್ಕರಿಸಿದ್ದರು. ಅದರ ಪ್ರತಿಫಲವೆನ್ನುವಂತೆ ಸಹಜವಾಗಿ ಅವರನ್ನು ಅಂದಿನ ಯಡಿಯೂರಪ್ಪ ಸರ್ಕಾರ ಕೂಡಲೇ ಮತ್ತೊಂದು ಕೆಲಸಕ್ಕೆ ಬಾರದ ಹುದ್ದೆಗೆ ವರ್ಗಾಯಿಸಿತ್ತು. ನಂತರ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸಿನಲ್ಲಿರುವ ಕೆಲವರಿಂದ ತಮಗೆ ಬೇಕಾದ ವರದಿ ಪಡೆದುಕೊಂಡು ಈ ಯೋಜನೆಗೆ 2019ರಲ್ಲಿ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಸಹ ಪಡೆದುಕೊಳ್ಳಲಾಯಿತು. ಆದರೆ ಪುಣ್ಯವಶಾತ್‌ ಕರ್ನಾಟಕ ಹೈಕೋರ್ಟ್ನಲ್ಲಿ ಪರಿಸರ ಕಾರ್ಯಕರ್ತರು ಸಲ್ಲಿಸಿದ ಅರ್ಜಿಗಳು ಮುಂದಿನ ಪ್ರಕ್ರಿಯೆ ಮತ್ತು ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿತು.nature - saakshatv

ನಾವು ಹವಾಮಾನ ದುರಂತಗಳ ಪ್ರಮಾಣ ಮತ್ತು ಆವರ್ತನವನ್ನು ವಿಶೇಷವಾಗಿ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಕರಾವಳಿ ರೇಖೆಗಳಲ್ಲಿ ನೋಡುತ್ತಲೇ ಇದ್ದೇವೆ. ನಮ್ಮ ಭೂಗ್ರಹ ಈಗಾಗಲೇ 1.10 ಸೆಲ್ಸಿಯಸ್‌ ತಾಪಮಾನದ ಹೆಚ್ಚಳ ಹೊಂದಿದೆ. ತಾಪಮಾನ ಏರಿಕೆ ಭವಿಷ್ಯದಲ್ಲಿ ಮತ್ತಷ್ಟು ದುರಂತಗಳ ಪ್ಯಾಕೇಜ್‌ ಹೊತ್ತು ತರಲಿದೆ. ಚಂಡಮಾರುತ ಮತ್ತು ಪ್ರವಾಹದ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆ ನಾವು ಅರ್ಥಮಾಡಿಕೊಳ್ಳಬೇಕಾದ ಸತ್ಯಗಳು ಹಲವು ಇವೆ. ನಮ್ಮ ಅನೇಕ ರಾಜ್ಯಗಳ ಕರಾವಳಿಗಳಲ್ಲಿ ಬಲಿಷ್ಠ ಕಾಡುಗಳಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿದ ಚಂಡಮಾರುತಗಳು ಜನಜೀವನದ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಸುಕೃತವೋ ಏನೂ ಕರ್ನಾಟಕದ ಕರಾವಳಿಯಲ್ಲಿ ಉತ್ತಮ ಗುಣಮಟ್ಟದ ಅರಣ್ಯವಿದೆ. ಅರಣ್ಯನಾಶ ಕೊನೆಗೊಳಿಸದಿದ್ದರೆ ಮತ್ತು ನಾವು ಈಗಿರುವ ಕಾಡುಗಳನ್ನು ಕಳೆದುಕೊಂಡರೆ, ನಮ್ಮ ಕರಾವಳಿ ಪ್ರದೇಶಗಳ ಮೇಲೆ ಅರಬ್ಬಿ ಸಮುದ್ರ ತನ್ನ ಹಕ್ಕು ಚಲಾಯಿಸುತ್ತದೆ ಅಷ್ಟೇ. ಗೋವಾ, ಕಾರವಾರ, ಉಡುಪಿ ಮತ್ತು ದಕ್ಷಿಣ ಕನ್ನಡದ ಕೆಲವು ಪ್ರದೇಶಗಳು ಅರಬ್ಬಿ ಸಮುದ್ರದ ಭೊರ್ಗರೆತ ಅಟ್ಟಹಾಸ ಮೆರೆದರೇ, ದೊಡ್ಡ ಪ್ರಮಾಣದಲ್ಲಿ ಮಾನವ ವಲಸೆ ಪ್ರಾರಂಭವಾಗುವುದರಲ್ಲಿ ಸಂಶಯವೇ ಇಲ್ಲ. ಈಗಲಾದರೂ ನಮ್ಮ ಸರ್ಕಾರಗಳು ಕಣ್ತೆರೆದು ನೋಡುವಂತಾಗಲಿ. ಇಲ್ಲವೇ ಮುಂಬರುವ ಪರಿಣಾಮಗಳಿಗೆ ದೊಡ್ಡ ಬೆಲೆ ತೆರಲು ಈಗಲೇ ಸಿದ್ಧರಾಗಬೇಕಾಗುತ್ತದೆ.
-ವಿಶ್ವಾಸ್‌ ಭಾರದ್ವಾಜ್‌..nature - saakshatv

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd