ಕೋವಿಡ್‍ಗೆ ಬಲಿಯಾದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್
ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಹಾಗೂ ಮಾಜಿ ಸಂಸದ ಮತ್ತು ಉತ್ತರ ಪ್ರದೇಶದ ಕ್ಯಾಬಿನೆಟ್ ದರ್ಜೆಯ ಸಚಿವ ಚೇತನ್ ಚೌಹಾಣ್ ಅವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
73ರ ಹರೆಯದ ಚೇತನ್ ಚೌಹಾಣ್ ಅವರು ಜುಲೈ 12ರಂದು ಕೋವಿಡ್ ಸೋಂಕಿಗೆ ಒಳಗಾಗಿ ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಆಗಸ್ಟ್ 16ರಂದು ಚೇತನ್ ಚೌಹಾಣ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ಪರ ಚೇತನ್ ಚೌಹಾಣ್ ಅವರು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಸುನೀಲ್ ಗವಾಸ್ಕರ್ ಜೊತೆ ಇನಿಂಗ್ಸ್ ಆರಂಭಿಸುತ್ತಿದ್ದ ಚೇತನ್ ಚೌಹಾನ್ ಟೆಸ್ಟ್ ಕ್ರಿಕೆಟ್ ನಲ್ಲಿ 2084 ರನ್ ದಾಖಲಿಸಿದ್ದರು. ಹಾಗೇ ಏಳು ಏಕದಿನ ಪಂದ್ಯಗಳಲ್ಲಿ 153 ರನ್ ಗಳಿಸಿದ್ದರು.
1981ರಲ್ಲಿ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದ ಚೇತನ್ ಚೌಹಾಣ್ ನಂತರ ಮುಖ ಮಾಡಿದ್ದು ರಾಜಕೀಯ ರಂಗಕ್ಕೆ. 1985ರಲ್ಲಿ ಚೇತನ್ ಚೌಹಾಣ್ ಅವರು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡ್ರು. ಉತ್ತರ ಪ್ರದೇಶದ ಅಲ್ಮೊರಾಹ್ ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅಲ್ಲದೆ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲೂ ಸೇವೆ ಸಲ್ಲಿಸಿದ್ದರು.








