ಕಲಬುರಗಿ : ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಹೆಮ್ಮಾರಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಐದು ದಿನಗಳ ಹಿಂದೆ ರಾಜಾ ಮದನಗೋಪಾಲ ನಾಯಕ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಕಲಬುರಗಿ ನಗರದ ಇಎಸ್ ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇನ್ನು ಮೃತರು ನ್ಯುಮೋನಿಯಾ, ಬಿಪಿ, ಸಕ್ಕರೆ ಕಾಯಿಲೆ ಸೇರಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು.
1974ರಿಂದಲೇ ರಾಜಕೀಯ ಅಖಾಡದಲ್ಲಿ ಸಕ್ರಿಯವಾಗಿದ್ದ ರಾಜಾ ಮದನಗೋಪಾಲ ನಾಯಕ ಅವರು, 1992-94 ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಸುರಪುರ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಲವು ಮಹತ್ವದ ಬದಲಾವಣೆ ತಂದಿದ್ದರು.








