U P ಚುನಾವಣೆ – ಮುಖ್ಯಸ್ಥೆ ಮಾಯಾವತಿ ಸ್ಪರ್ಧಿಸುವುದಿಲ್ಲ ಎಂದ ಪಕ್ಷದ ವಕ್ತಾರರು
ಮುಂಬರುವ 2022 ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿಯೇ ಬಹುಜನ ಸಮಾಜ ಪಕ್ಷ (BSP) ಪಕ್ಷ ಒಂದು ಹೆಜ್ಜೆ ಹಿಂದೆ ಸರಿದಿದೆ. ತನ್ನ ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಾಯಾವತಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
“ಮಾಜಿ ಮುಖ್ಯಮಂತ್ರಿ ಮಾಯಾವತಿ ಮತ್ತು ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ” ಎಂದು ಬಿಎಸ್ಪಿ ನಾಯಕ ಮತ್ತು ಸಂಸದ ಸತೀಶ್ ಚಂದ್ರ ಮಿಶ್ರಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ಯುಪಿ ರಾಜಕೀಯದಲ್ಲಿ ಅಪ್ರತಿಮ ವ್ಯಕ್ತಿಯಾಗಿರುವ ಮಾಯಾವತಿ ಅವರು ಈ ಹಿಂದೆಯೂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಉತ್ತರ ಪ್ರದೇಶದಲ್ಲಿ, 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮತ್ತೊಬ್ಬ ಮಾಜಿ ಸಿಎಂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ಬಿಎಸ್ಪಿ ನಾಯಕ ಎಸ್ಸಿ ಮಿಶ್ರಾ ಕೂಡ ವಾಗ್ದಾಳಿ ನಡೆಸಿದರು. ಸಮಾಜವಾದಿ ಪಕ್ಷದಲ್ಲಿ 400 ಅಭ್ಯರ್ಥಿಗಳಿಲ್ಲದಿದ್ದರೆ, ಅವರು 400 ಸ್ಥಾನಗಳನ್ನು ಹೇಗೆ ಗೆಲ್ಲುತ್ತಾರೆ ? ಎಸ್ಪಿ ಅಥವಾ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ ಬಿಎಸ್ಪಿ ಸಂಸದರು ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 403 ಸ್ಥಾನಗಳಲ್ಲಿ 312 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು.