ವಿಮಾನ ಅಪಘಾತವಾಗಿ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಎರಡು ವಾರಗಳ ಕಾಲ ದಟ್ಟ ಕಾಡೊಂದರಲ್ಲಿ ಸುತ್ತಾಡಿ ಪತ್ತೆಯಾಗಿರುವ ಘಟನೆ ಕೊಲಂಬಿಯಾ ನಡೆದಿದೆ.
ಮೇ. 1ರಂದು ಸೆಸ್ನಾ 206 ಎಂಬ ವಿಮಾನ ಸ್ಥಳೀಯ ಮಕ್ಕಳು, ಅಪ್ರಾಪ್ತರನ್ನು ಸೇರಿದಂತೆ ಒಟ್ಟು 7 ಮಂದಿಯನ್ನು ಹೊತ್ತುಕೊಂಡು ಅಮೆಜಾನ್ ಪ್ರಾಂತ್ಯದ ಅರರಾಕುರಾ ಮತ್ತು ಗುವಿಯಾರ್ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಗುವಿಯಾರ್ ನಡುವೆ ಸಂಚರಿಸುತ್ತಿತ್ತು. ಆಗ ವಿಮಾನ ಇಂಜಿನ್ ನಲ್ಲಿ ವೈಫಲ್ಯ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಯತ್ನಿಸಿದರೂ ಅದು ಸಾಧ್ಯವಾಗದೇ ಪತನಗೊಂಡಿತ್ತು.
ಪತನಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಇಳಿದ ತಂಡ ಪೈಲೆಟ್ ಸೇರಿದಂತೆ ಮೂವರು ವಯಸ್ಕರ ಮೃತದೇಹ ವಿಮಾನದೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ನುಳಿದ ನಾಲ್ವರ ಸುಳಿವು ಸಿಕ್ಕಿರಲಿಲ್ಲ. ಇದಕ್ಕಾಗಿ ಸರ್ಕಾರ ಪೊಲೀಸ್ ಸ್ನಿಫರ್ ಡಾಗ್ಗಳೊಂದಿಗೆ 100 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದರು.
ಸೈನಿಕರು ಸತತ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಾಡಿನ ದಾರಿಯಲ್ಲಿ ಕೊಂಬೆಗಳ ನಡುವೆ ಕತ್ತರಿ ಮತ್ತು ಹೇರ್ ಟೈ ಪತ್ತೆಯಾಗಿತ್ತು. ಮಗು ಹಾಲು ಕುಡಿಯುವ ಬಾಟಲಿ ಹಾಗೂ ಅರ್ಧ ತಿಂದ ಹಣ್ಣು ಕೂಡ ಹುಡುಕಾಟದ ದಾರಿಯಲ್ಲಿ ಪತ್ತೆಯಾಗಿತ್ತು. ನಿರಂತರವಾಗಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಕಾಡಿನಲ್ಲಿ ಅಲೆದಾಡುತ್ತಿದ್ದ 11 ತಿಂಗಳ ಮಗು, 4 ವರ್ಷದ ಮಗು 13, 9 ವರ್ಷದ ಮಕ್ಕಳು ಪತ್ತೆಯಾಗಿದ್ದಾರೆ. ಎಲ್ಲರೂ ಜೀವಂತವಾಗಿಯೇ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಟ್ವೀಟ್ ಮಾಡಿದ್ದಾರೆ.