ಮೋದಿ ಅವರನ್ನು ಭೇಟಿ ಮಾಡಿದ ಫ್ರಾನ್ಸ್ ರಕ್ಷಣಾ ಸಚಿವೆ….
ಭಾರತಕ್ಕೆ ಭೇಟಿ ನೀಡಿರುವ ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಇದಕ್ಕೂ ಮುನ್ನ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಮಾಧ್ಯಮಗಳ ಜೊತೆಗಿನ ಸಂವಾದದಲ್ಲಿ ಪಾರ್ಲಿ ಮೂರು ಪ್ರಮುಖ ವಿಷಯಗಳನ್ನು ಹೇಳಿದ್ದಾರೆ. ಮೊದಲನೆಯದು- ಭಾರತ ನಮ್ಮ ವಿಶೇಷ ಸ್ನೇಹಿತ ಮತ್ತು ಪಾಲುದಾರ. ಹೆಚ್ಚಿನ ರಫೇಲ್ ಜೆಟ್ ಯುದ್ಧವಿಮಾನಗಳು ಅಗತ್ಯವಿದ್ದರೆ, ಫ್ರಾನ್ಸ್ ಅವುಗಳನ್ನು ತಲುಪಿಸುತ್ತದೆ.
ಎರಡನೆಯದು- ಚೀನಾ ನಮ್ಮ ವ್ಯಾಪಾರ ಪಾಲುದಾರರಾಗಿರಬಹುದು, ಆದರೆ ಈ ಪ್ರದೇಶದಲ್ಲಿ ಅದರ ವರ್ತನೆ ತುಂಬಾ ಆಕ್ರಮಣಕಾರಿಯಾಗಿದೆ. ನಾವು ಇಂಡೋ-ಪೆಸಿಫಿಕ್ ಪ್ರದೇಶದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ.
ಮೂರನೆಯದು- ಮೇಕ್ ಇನ್ ಇಂಡಿಯಾದಲ್ಲಿ ಫ್ರಾನ್ಸ್ ಕೂಡ ಸಂಪೂರ್ಣ ಸಹಕಾರ ನೀಡಲಿದೆ.