ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬಡ ಜನರ ಬದುಕು ಬರ್ಬಾದ್ ಆಗಿದೆ. ಕೈಯಲ್ಲಿ ಕಾಸು, ಹೊಟ್ಟೆಗೆ ಊಟವಿಲ್ಲದ ಪರದಾಡುತ್ತಿದ್ದಾರೆ. ಹೀಗಾಗಿ ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ರಾಜ್ಯದಲ್ಲಿ ಅಗತ್ಯ ವಸ್ತುಗಳ ಕೊರತೆ ಇದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟೀಕರಣ ನೀಡಿದ್ದು, ರಾಜ್ಯದಲ್ಲಿ ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳ ಕೊರತೆಯಿಲ್ಲ, ಜನ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರದಿಂದ ಬಡವರಿಗೆ ಉಚಿತವಾಗಿ ಕೆಎಂಎಫ್ ಹಾಲು ನೀಡಲಾಗುವುದು. ಕೆಎಂಎಫ್ ಮೂಲಕ 7 ಲಕ್ಷ ಲೀಟರ್ ಹಾಲನ್ನು ಸರ್ಕಾರ ಖರೀದಿಸಿ ಕೊಳಚೆ ಪ್ರದೇಶಗಳು ಹಾಗೂ ಬಡಜನರು ವಾಸಿಸುವ ಪ್ರದೇಶಗಳಲ್ಲಿ ಉಚಿತವಾಗಿ ಏಪ್ರಿಲ್ 14 ರವರೆಗೆ ಹಾಲು ವಿತರಿಸಲಾಗುವುದು ಎಂದರು.
ವಿಧವಾ ವೇತನ, ವೃದ್ದಾಪ್ಯ ವೇತನ ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಟೊಮೊಟೊ, ಕರಬೂಜ, ದ್ರಾಕ್ಷಿ ಸರಬರಾಜಿಗೆ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಹಾಪ್ ಕಾಮ್ಸ್ ನಲ್ಲಿ ಟೊಮೊಟೊ, ದ್ರಾಕ್ಷಿ, ಕಲ್ಲಂಗಡಿ ಹಾಗೂ ಕೋಳಿ ಮೊಟ್ಟೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು ಹಂಪಲು ತರಕಾರಿ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.








