ಫ್ರೆಂಚ್ ಓಪನ್ 2021 – ರೋಲ್ಯಂಡ್ ಗ್ಯಾರೋಸ್ ನಲ್ಲಿ ಮುಂದುವರಿದ ನಡಾಲ್ ಆರ್ಭಟ.. ಸೋಲಿನಿಂದ ಜಾಕೊವಿಕ್ ಬಚಾವ್..!
ಕ್ಲೋ ಕೋರ್ಟ್ ಕಿಂಗ್ ರಫೆಲ್ ನಡಾಲ್ ಮತ್ತು ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜಾಕೊವಿಕ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್ ನ ರಫೆಲ್ ನಡಾಲ್ ಅವರು 7-5, 6-3, 6-0ಯಿಂದ ಇಟಲಿಯ ಜಾನಿಕ್ ಸಿನ್ನೆರ್ ಅವರನ್ನು ನೇರ ಸೆಟ್ ಗಳಿಂದ ಪರಾಭವಗೊಳಿಸಿದ್ರು.
ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ರಫೆಲ್ ನಡಾಲ್ ಅವರು ರೋಲ್ಯಂಡ್ ಗ್ಯಾರೋಸ್ ನಲ್ಲಿ 13 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಲ್ಲದೆ ಇದೀಗ ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಮೇಲೆ ಚಿತ್ತವನ್ನಿಟ್ಟಿದ್ದಾರೆ. ಈ ನಡುವೆ ಫ್ರೆಂಚ್ ಓಪನ್ ನಲ್ಲಿ 35 ಸೆಟ್ ಪಂದ್ಯಗಳನ್ನು ಗೆದ್ದಿರುವ ಸಾಧನೆ ಕೂಡ ಮಾಡಿದ್ದಾರೆ.
2017ರಿಂದ ರಫೆಲ್ ನಡಾಲ್ ಅವರು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸತತವಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.2005ರಿಂದ ಇಲ್ಲಿಯವರೆಗೆ ರಫೆಲ್ ನಡಾಲ್ ಅವರು 2009, 2015 ಮತ್ತು 2016ರಲ್ಲಿ ಮಾತ್ರ ಪ್ರಶಸ್ತಿ ಗೆದ್ದುಕೊಂಡಿಲ್ಲ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಡಿಯಾಗೊ ಸ್ಚೆವಾರ್ಟಜಮನ್ ಅವರನ್ನು ಎದುರಿಸಲಿದ್ದಾರೆ.
ಅರ್ಜೆಂಟಿನಾದ ಡಿಯಾಗೊ ಅವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ 7-6, 6-4, 7-5ರಿಂದ ಜರ್ಮನಿಯ ಜಾನ್ ಲಿನಾರ್ಡ್ ಸ್ಟ್ರಫ್ ಅವರನ್ನು ಮಣಿಸಿದ್ರು.
ಪುರುಷರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು ಅಚ್ಚರಿಯಾಗಿ ಮುನ್ನಡೆ ಸಾಧಿಸಿದ್ದಾರೆ. ಜಾಕೊವಿಕ್ ವಿರುದ್ಧದ ಪಂದ್ಯದ ಮೊದಲ ಎರಡು ಸೆಟ್ ಗಳನ್ನು ಲಾರೆಂಝೋ ಮುಸೆಟಿ ಅವರು ಗೆದ್ದುಕೊಂಡಿದ್ದರು. ಈ ವೇಳೆ ಮುಸೆಟಿ ಅವರು ಗಾಯಗೊಂಡು ಟೂರ್ನಿಯಿಂದ ಹೊರನಡೆದಿದ್ದಾರೆ. ಹೀಗಾಗಿ ಜಾಕೊವಿಕ್ ಅದೃಷ್ಟದ ಬಲದಿಂದಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.